ಎಂಬೆಡೆಡ್ ಸಿಸ್ಟಮ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿ   -ನರಗುಂದ


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ 23: ಎಂಬೆಡೆಡ್ ಸಿಸ್ಟಮ್ ‘  ಮಾನವನ ಮತ್ತು ಯಾಂತ್ರಿಕೃತ ಜಗತ್ತಿನ ಅವಿಭಾಜ್ಯ ಅಂಗವಾಗಿದ್ದು ಬಹು ಬೇಡಿಕೆಯ ವಲಯವಾಗಿದೆ. ವಿದ್ಯುನ್ಮಾನ ಮತ್ತು ಗಣಕ ವಿಜ್ಞಾನದ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ಎಂಬೆಡೆಡ್ ಸಿಸ್ಟಮ್‌ನಲ್ಲಿ ರೂಪಿಸಿಕೊಳ್ಳಬಹುದೆಂದು
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಪಕರಾದ ಡಾ.ಮುಕುಂದ ನರಗುಂದ ಹೇಳಿದರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ( ಸ್ವಾಯತ್ತ ) ಕಾಲೇಜಿನಲ್ಲಿ ಆಂತರಿಕ  ಗುಣಮಟ್ಟ ಭರವಸೆ ಕೋಶ ಹಾಗೂ ವಿದ್ಯುನ್ಮಾನ ವಿಭಾಗದ ವತಿಯಿಂದ ಆಯೋಜಿಸಿದ್ದ  ‘ ಎಂಬೆಡೆಡ್ ಸಿಸ್ಟಮ್  ‘ ಕುರಿತು  ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಒಂದು ನಿರ್ದಿಷ್ಟ ಕಾರ್ಯಕ್ಕಾಗಿ ವಿನ್ಯಾಸಗೊಳಿಸಲಾದ ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳ ಸಂಯೋಜನೆಯೇ ಇದಾಗಿದೆ. ಇದು ಒಂದು ಪ್ರತಿಕ್ರಿಯಾತ್ಮಕ ಘಟಕವಾಗಿದೆ. ಇದು ನೈಜ ಸಮಯದಲ್ಲಿ ಸಂಕೇತವನ್ನು ಸ್ವೀಕರಿಸಿದರೆ ಮಾತ್ರ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ ಎಂದು ವಿಶ್ಲೇಷಿಸಿದರು.
ಈ ಸಿಸ್ಟಮನ ಬಳಕೆಯು ಉದ್ಯಮವನ್ನು ಉನ್ನತ ಮಟ್ಟಕ್ಕೆ ಒಯ್ಯಲು ಪ್ರಮುಖ ಪಾತ್ರ ವಹಿಸಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ
ಡಾ. ಬಿ .ಸತ್ಯನಾರಾಯಣ ಅವರು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥರಾದ ಡಾ.ಪಂಚಾಕ್ಷರಿ ಈ ಸಿಸ್ಟಮನ್ನು  ಈ ಹೊತ್ತು ಎಲ್ಲ ವಲಯಗಳಲ್ಲಿ ಬಳಸಬಹುದಾಗಿದೆ. ವಿದ್ಯಾರ್ಥಿಗಳಿಗೆ ಇದರ ಬಗೆಗೆ ಹೊಸ ಅರಿವನ್ನು ಮೂಡಿಸುವ ಒತ್ತಾಸೆ  ಈ ಕಾರ್ಯಕ್ರಮದ ಹಿಂದೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಹೆಚ್ .ಕೆ. ಮಂಜುನಾಥ ರೆಡ್ಡಿ  ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವ ವಿದ್ಯಾರ್ಥಿಗಳ ಕನಸಿಗೆ ಈ ತೆರನಾದ ಕಾರ್ಯಕ್ರಮಗಳು ಕೈ ದೀವಿಗೆಯಂತೆ ನೆರವಾಗುತ್ತವೆ ಎಂದರು.
ವೇದಿಕೆಯ ಮೇಲೆ ಬೌತ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ , ಸಹಾಯಕ ಪ್ರಾಧ್ಯಾಪಕರಾದ ಗೀತಾ ಬಾಬು ಸಿಂಗ್ , ಪಂಪನಗೌಡ ಮುಂತಾದವರು ಇದ್ದರು.