ಎಂಪ್ರೆಸ್ ಶಾಲೆಯ ಗೋಡೆಗಳ ಮೇಲೆ ಬಣ್ಣದ ಚಿತ್ತಾರ..

ತುಮಕೂರು, ಡಿ. ೧೬- ಚಿತ್ರಕಲೆ ಎನ್ನುವುದು ಒಂದೇ ನೋಟಕ್ಕೆ ಎಂಥವರನ್ನೂ ಸೆಳೆದು ಬಿಡುತ್ತದೆ. ಅದರಲ್ಲೂ ಕಲಾವಿದನ ಕುಂಚದಲ್ಲಿ ಅರಳುವ ಚಿತ್ರಗಳು ಸುಂದರವಾಗಿದ್ದರೆ ನೋಡುಗರು ಫಿದಾ ಆಗಿ ಬಿಡುತ್ತಾರೆ, ಅಂಥ ತಾಕತ್ತು ಈ ಚಿತ್ರ ಕಲೆಗಿದೆ.
ತುಮಕೂರಿನ ಶಾಲೆಯೊಂದರ ಗೋಡೆ ಮೇಲೆ ಹಾಗೂ ಶಾಲಾ ಕೊಠಡಿ ಒಳಗೆ ಅರಳಿರುವ ಚಿತ್ರಗಳನ್ನು ನೋಡಿದರೆ ಸಾಕು ಎಂಥವರು ತಲೆದೂಗದೇ ಇರಲಾರರು.
ಹೌದು, ನಗರದ ಎಂಪ್ರೆಸ್ ಶಾಲೆಯಲ್ಲಿ ಶಾಲಾ ಕೊಠಡಿ ಹಾಗೂ ಗೋಡೆಯ ಮೇಲೆ ವಿವಿಧ ರೀತಿಯ ಬಣ್ಣದ ಚಿತ್ತಾರ ನೋಡುಗರ ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತವೆ. ಇಲ್ಲಿನ ಯುಕೆಜಿ, ಎಲ್‌ಕೆಜಿ ಮಕ್ಕಳಿಗಾಗಿ ಬಣ್ಣದ ಲೋಕವನ್ನೇ ಸೃಷ್ಠಿಸಲಾಗಿದೆ.
ಮಕ್ಕಳಿಗೆ ಇಷ್ಟವಾಗುವ ರೀತಿಯ ಚಿತ್ರಗಳನ್ನೇ ಬರೆಯಲಾಗಿದ್ದು, ಇವು ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲಿವೆ.
ಚಿತ್ರಕಲಾ ಶಿಕ್ಷಕರ ತಂಡ ಇಲ್ಲಿನ ಶಾಲಾ ಕೊಠಡಿಗಳ ಗೋಡೆಯ ಮೇಲೆ ವಿಶೇಷ ಚಿತ್ರಗಳನ್ನು ರಚಿಸಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿವೆ.
ಗಣಿತದ ಆಯಾಮ ರಚನೆ, ಹಣ್ಣು, ತರಕಾರಿ ರಾರಾಜಿಸುತ್ತಿವೆ. ಪ್ರಾಣಿ ಪಕ್ಷಿಗಳು ಹಾರುತ್ತಿವೆಯೇನೋ ಎಂಬಂತೆ ಭಾಸವಾಗುವ ಚಿತ್ರಗಳು, ಓಡುತ್ತಿರುವ ರೈಲು, ಸೂರ್ಯನ ಉದಯ, ಪ್ರಕೃತಿ ಸೌಂದರ್ಯ, ಶಾಲಾ ಮೈದಾನ, ಹಾರುವ ಚಿಟ್ಟೆಗಳು, ಮಿಕ್ಕಿ ಮೌಸ್, ಛೋಟಾ ಭೀಮ್ ಸೇರಿದಂತೆ ವಿವಿಧ ಚಿತ್ರಗಳು ಶಾಲಾ ಗೋಡೆಗಳ ಮೇಲೆ ಅರಳಿ ನಿಂತಿವೆ.
ಮಕ್ಕಳ ಕಲಿಕೆಗೆ ಅನುಕೂಲವಾಗಲು ಸ್ಲೇಟ್‌ಗಳ ಮಾದರಿ ಚಿತ್ರ ಬರೆಯಲಾಗಿದ್ದು, ಅಲ್ಲಿಯೇ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಬರೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇಷ್ಟೆಲ್ಲಾ ಚಿತ್ರಗಳು ಚಿತ್ರಕಲಾ ಶಿಕ್ಷಕರಾದ ರವೀಶ್ ಕೆ.ಎಂ., ಜಿಹೆಚ್‌ಎಸ್ ನೇರಳೇಕೆರೆ, ರಂಗಸ್ವಾಮ್ಯಯ್ಯ ಜಿಹೆಚ್‌ಎಸ್ ಚೇಳೂರು, ಇಂದ್ರಕುಮಾರ್ ಜಿಹೆಚ್‌ಎಸ್ ಹೆಬ್ಬೂರು, ಆನಂದ್ ಜಿಹೆಚ್‌ಎಸ್ ಕೊಂಡ್ಲಿ ,ವೇಣುಗೋಪಾಲ್ ಜಿಹೆಚ್‌ಎಸ್ ಶೇಷೇನಹಳ್ಳಿ ಹಾಗೂ ಹೀನಾ ಕೌಸರ್ ಜೆಜಿಜಿಸಿ ತುಮಕೂರು ಇವರ ಕೈಚಳಕದಲ್ಲಿ ಅರಳಿದ್ದು, ಮಕ್ಕಳ ಪಾಲಿಗೆ ಬಹು ಉಪಯುಕ್ತವಾಗಲಿವೆ.
ಕೊರೊನಾ ಕಾರಣದಿಂದ ಎಲ್‌ಕೆಜಿ, ಯುಕೆಜಿ ಶಾಲೆ ಆರಂಭವಾಗಿಲ್ಲ. ಇದರ ನಡುವೆ ಚಿತ್ರಕಲಾ ಶಿಕ್ಷಕರು ಮುಂದೆ ಶಾಲೆ ಆರಂಭವಾಗುವ ವೇಳೆಗೆ ಉತ್ತಮ ಚಿತ್ರ ಬರೆದರೆ ಮಕ್ಕಳಿಗೆ ಅನುಕೂಲ ಆಗಲಿದೆ ಎಂದು ನಿರ್ಧರಿಸಿ ಚಿತ್ತಾರ ಮೂಡಿಸಿದ್ದಾರೆ.
ಚಿತ್ರಕಲಾ ಶಿಕ್ಷಕರ ಕಾರ್ಯಕ್ಕೆ ಎಂಪ್ರೆಸ್ ಕಾಲೇಜಿನ ಪ್ರಾಶುಪಾಲ ಕೆ.ಎಸ್.ಸಿದ್ದಲಿಂಗಪ್ಪ, ಉಪ ಪ್ರಾಶುಪಾಲ ಎಸ್.ಕೃಷಪ್ಪ ಹಾಗೂ ಶಿಕ್ಷಣ ಇಲಾಖೆ ಸಹಕಾರ ನೀಡಿದೆ.
ಒಟ್ಟಾರೆ ತುಮಕೂರು ಜಿಲ್ಲಾ ಚಿತ್ರ ಕಲಾ ಸಂಘ ಹಾಗೂ ಚಿತ್ರಕಲಾ ಶಿಕ್ಷಕರ ತಂಡ ಇಡೀ ಶಾಲೆಯಲ್ಲಿ ೫೦ ಕ್ಕೂ ಹೆಚ್ಚು ಮಕ್ಕಳಿಗೆ ಮುದ್ದು ಎನಿಸುವ ಚಿತ್ರಗಳನ್ನು ಬರೆದಿದ್ದಾರೆ. ಬಣ್ಣದಲ್ಲಿ ಕಂಗೊಳಿಸುತ್ತಿರುವ ಶಾಲಾ ಆವರಣವನ್ನು ನೋಡೋದೆ ಆನಂದ, ಚಿತ್ರಕಲಾ ಶಿಕ್ಷಕರ ಕಾರ್ಯಕ್ಕೆ ಇಡೀ ಶಿಕ್ಷಕ ವೃಂದವೇ ಮೆಚ್ಚುಗೆ ವ್ಯಕ್ತಪಡಿಸಿದೆ.

ಶಾಲಾ ಕೊಠಡಿ ಹಾಗೂ ಗೋಡೆ ಮೇಲೆ ಚಿತ್ರಕಲೆ ಬರೆದಿರುವುದರಿಂದ ಪುಟಾಣಿ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೊಂದಲಿದ್ದಾರೆ. ಅಲ್ಲದೆ ಚಿತ್ರಗಳು ಮಕ್ಕಳಿಗೆ ಇಷ್ಟವಾಗಲಿವೆ. ಆ ಚಿತ್ರಗಳು ಯಾವುವು, ಅದರ ಹೆಸರೇನು ಎಂಬುದನ್ನು ಮಕ್ಕಳಿಗೆ ಟೀಚರ್‍ಗಳು ತಿಳಿಸಿಕೊಡಲು ಅನುಕೂಲವಾಗಲಿದೆ. ಸರ್ಕಾರಿ ಶಾಲೆಯಲ್ಲಿ ಚಿತ್ರ ಬರೆಯಲು ತುಂಬಾ ಖುಷಿಯಾಯಿತು. ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಎಂಬಂತೆ ಎಂಪ್ರೆಸ್‌ನಲ್ಲಿನ ಎಲ್‌ಕೆಜಿ, ಯುಕೆಜಿ ಶಾಲೆ ಬಣ್ಣದಿಂದ ಕಂಗೊಳಿಸುತ್ತಿದೆ. ಇದು ನಮಗೆ ಹೆಮ್ಮೆಯ ಸಂಗತಿ.
-ರವೀಶ್ ಕೆ.ಎಂ., ಚಿತ್ರಕಲಾ ಶಿಕ್ಷಕ,
ಜಿಹೆಚ್‌ಎಸ್ ನೇರಳೇಕೆರೆ.