ಎಂಪೋಟೇರಿಸಿನ್ ಬಿ ಇಂಜಕ್ಷನ್ ಕೊರತೆ – ಆತಂಕ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ
ರಾಯಚೂರು.ಮೇ.೨೧- ಕೊರೊನಾ ಮಹಾಮಾರಿಯ ಚಿಕಿತ್ಸೆ ಸಮಸ್ಯೆಯೊಂದಿಗೆ ಈಗ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಭಯಾನಕ ರೋಗ ಚಿಕಿತ್ಸೆ ಜಿಲ್ಲಾಡಳಿತಕ್ಕೆ ಮತ್ತೊಂದು ಸವಾಲಾಗಿ ನಿಂತಿದೆ.
ಇಲ್ಲಿವರೆಗೆ ನಗರಗಳಿಗೆ ಸೀಮಿತವಾಗಿದ್ದ ಈ ಬ್ಲ್ಯಾಂಕ್ ಫಂಗಸ್ ಈಗ ಗ್ರಾಮಾಂತರ ಪ್ರದೇಶದಲ್ಲೂ ಅನೇಕರಿಗೆ ಕಂಡು ಬಂದಿದ್ದು, ಔಷಧಿಯಿಲ್ಲದೇ ಜನ ಸಾಯುವಂತಹ ದಾರುಣ ಸ್ಥಿತಿ ನಿರ್ಮಾಣವಾಗಿದೆ. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಬ್ಲ್ಯಾಕ್ ಫಂಗಸ್ ರೋಗಿಯೊಬ್ಬರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಿರ್ವಹಿಸಲಾಗಿದೆ. ಆದರೆ, ಔಷಧಿ ಪೂರೈಕೆ ವೈದ್ಯರಿಗೆ ಬಹುದೊಡ್ಡ ಸವಾಲಾಗಿದೆ. ಕೊರೊನಾ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಎಂಪೋಟೆರಿಸಿನ್ ಬಿ ಇಂಜಕ್ಷನ್ ಏಕಮಾತ್ರ ಔಷಧಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ರಾಮಬಾಣವಾಗಿದೆ.
ದುರಂತವೆಂದರೇ ಈ ಔಷಧಿ ದೇಶದಲ್ಲಿಯೇ ಅಭಾವವಿರುವುದು ಜಿಲ್ಲೆಯ ಬ್ಲ್ಯಾಕ್ ಫಂಗಸ್ ರೋಗಿಗಳು ಸಾವಿನ ಆತಂಕಕ್ಕೆ ಗುರಿಯಾಗುವಂತಾಗಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೂ ಸುಮಾರು ೧೦೦ ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಪೀಡಿತರು ಅದರಲ್ಲೂ ವಿಶೇಷವಾಗಿ ಮಧುಮೇಹ ಹಾಗೂ ಸ್ಟೆರಾಯಿಡ್ ಬಳಸಿದ ಕೊರೊನಾ ಪೀಡಿತರು ಈಗ ಬ್ಲ್ಯಾಕ್ ಫಂಗಸ್ ಬಲೆಗೆ ಸಿಕ್ಕಿಕೊಂಡಿದ್ದಾರೆ. ಕಳೆದ ವಾರ ಮೂರು, ನಾಲ್ಕು ಜನರಲ್ಲಿ ಕಂಡು ಬಂದ ಈ ಪ್ರಕರಣ ಈಗ ನಿಧಾನಕ್ಕೆ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ.
ಒಂದೆಡೆ ಕೊರೊನಾ ಸೋಂಕಿತರ ಚಿಕಿತ್ಸೆ ಸವಾಲಾಗಿದ್ದರೇ, ಮತ್ತೊಂದೆಡೆ ಬ್ಯಾಕ್ ಫಂಗಸ್ ಚಿಕಿತ್ಸೆ ಮತ್ತೊಂದು ಬಹುದೊಡ್ಡ ಸವಾಲಾಗಿದೆ. ಎಂಪೋಟೇರಿಸಿನ್ ಬಿ ಇಂಜಕ್ಷನ್ ಮಾತ್ರ ಇದಕ್ಕೆ ಬಳಕೆಯಾಗುತ್ತದೆ. ದುರಂತವೆಂದರೇ ಎಲ್ಲಿಯೂ ಸಹ ಇದು ದೊರೆಯುತ್ತಿಲ್ಲ. ಇಲ್ಲಿಂದ ಹೈದ್ರಾಬಾದ್‌ಗೆ ಚಿಕಿತ್ಸೆಗೆ ಹೋಗ ಸೋಂಕಿತರಿಗೂ ಈ ಔಷಧಿ ದೊರೆಯದೇ, ಮರಳಿ ಬರುವಂತಹ ಪ್ರಸಂಗ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧಿಗಾಗಿ ಡಿಹೆಚ್‌ಓ ರಿಂದ ಯಾವುದೇ ವಿಶೇಷ ಪ್ರಯತ್ನ ನಡೆಯುತ್ತಿಲ್ಲ. ಬ್ಲ್ಯಾಕ್ ಫಂಗಸ್ ಬಗ್ಗೆ ಮಾಹಿತಿಯೂ ಸರಿಯಾಗಿ ನೀಡುತ್ತಿಲ್ಲ.
ಕೊರೊನಾಗಿಂತ ಮಾರಣಾತೀಕವಾದ ಬ್ಲ್ಯಾಕ್ ಫಂಗಸ್‌ಗೆ ಸಕಾಲಕ್ಕೆ ಎಂಪೋಟೇರಿಸಿನ್ ಬಿ ಇಂಜಕ್ಷನ್ ದೊರೆಯದಿದ್ದರೇ, ರೋಗಿ ಉಳಿಯುವ ಸಾಧ್ಯತೆಗಳೇ ಕಡಿಮೆಯಾಗಿವೆ. ಈ ವಿಷಯದ ಬಗ್ಗೆ ಜಿಲ್ಲಾಡಳಿತ ಇಲ್ಲಿವರೆಗೂ ಕೈಗೊಂಡ ಕ್ರಮಗಳೇನು?. ಔಷಧಿ ಇಲ್ಲದಿದ್ದರೇ, ಚಿಕಿತ್ಸೆ ಗತಿಯೇನು?. ಎಂಪೋಟೇರಿಸಿನ್ ಬಿ ಇಂಜಕ್ಷನ್ ಒಬ್ಬ ರೋಗಿಗೆ ಕನಿಷ್ಟ ೨೦ ರಿಂದ ೩೦ ಇಂಜಕ್ಷನ್ ಅಗತ್ಯವಿರುತ್ತದೆ. ಔಷಧಿ ದೊರೆತರೇ ಇದು ಚಿಕಿತ್ಸೆಗೆ ಸುಲಭವಾಗಲು ಔಷಧಿ ಕೊರತೆ ಚಿಕಿತ್ಸೆಯನ್ನೇ ಸವಾಲಾಗಾವಂತೆ ಮಾಡಿದೆ.
ಬ್ಲ್ಯಾಕ್ ಫಂಗಸ್ ಪ್ರಕರಣಗಳು ಜಿಲ್ಲೆಯೊಂದರಲ್ಲಿಯೇ ೧೦೦ ಸಂಖ್ಯೆ ದಾಟುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಗಂಭೀರಗೊಳ್ಳದಿದ್ದರೇ, ಬ್ಲ್ಯಾಕ್ ಫಂಗಸ್ ಜಿಲ್ಲೆಯಲ್ಲಿ ಮತ್ತೊಂದು ಮಾರಣಹೋಮಕ್ಕೆ ದಾರಿಯಾಗುವ ಸಾಧ್ಯತೆಗಳಿವೆ. ಈಗಾಗಲೇ ಕೊರೊನಾದಿಂದ ಅನೇಕರು ಮೃತಪಟ್ಟಿದ್ದು, ಈಗ ಬ್ಲ್ಯಾಕ್ ಫಂಗಸ್‌ಗೆ ಬಲಿಯಾಗುವ ಸಾಧ್ಯತೆಗಳಿವೆ.