ಎಂಪಿ ಕಚೇರಿಗೆ ಮುತ್ತಿಗೆ ಹಾಕಿದ ರೈತರು

ಸಂಜೆವಾಣಿ ನ್ಯೂಸ್
ಮೈಸೂರು: ಫೆ.27:- ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಕೇಂದ್ರ ಸರ್ಕಾರ ಪೆÇಲೀಸರನ್ನು ದುರ್ಬಳಕೆ ಮಾಡಿಕೊಂಡು ಹತಿಕ್ಕುತ್ತಿದೆ. ಈ ವಿಚಾರದಲ್ಲಿ ಸಂಸದರು ರೈತರ ಪರ ದನಿ ಎತ್ತದೆ ನಿದ್ರಾವಸ್ಥೆಯಲ್ಲಿದ್ದಾರೆ ಎಂದು ಆರೋಪಿಸಿ ನೂರಾರು ರೈತರು ಸೋಮವಾರ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿರುವ ಪ್ರತಾಪ್ ಸಿಂಹ ಅವರ ಕಚೇರಿ ಎದುರು ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೆÇಲೀಸರು ಪ್ರತಿಭಟನಾನಿರತ ರೈತರನ್ನು ತಡೆದರು. ಈ ಸಂದರ್ಭದಲ್ಲಿ ಪೆÇಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು, ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಪ್ರತಿಭಟನಾನಿರತ ರೈತರು, ನಮ್ಮ ಸಮಸ್ಯೆ ಕುರಿತು ಒತ್ತಾಯಿಸಲು ಬಂದಿದ್ದರು, ರೈತರಿಗೆ ಹೆದರಿ ಸಂಸದರು ಕಾಣೆಯಾಗಿದ್ದು, ರೈತ ವಿರೋಧಿ ಸಂಸದರಿಗೆ ಧಿಕ್ಕಾರ, ಕಾಣೆಯಾಗಿರುವ ಸಂಸದರನ್ನು ಹುಡುಕಿ ಕೊಡಿ ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪಂಜಾಬ್, ಹರಿಯಾಣದಲ್ಲಿ ರೈತರ ಮೇಲೆ ಪೆÇಲೀಸ್ ದೌರ್ಜನ್ಯ ನಿಲ್ಲಲಿ, ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಲಿ, ರೈತರ ಪರವಾಗಿ ಹೋರಾಡುತ್ತಿರುವ ಪಂಜಾಬ್ ಹರಿಯಾಣ ರಾಜ್ಯಗಳ ರೈತರು ಸಂಯುಕ್ತ ಕಿಸಾನ್ ಮೋರ್ಚಾ(ರಾಜಕಿಯೇತರ) ಸಂಘಟನೆಯ ರೈತರ ಮೇಲೆ ಕೇಂದ್ರ ಸರ್ಕಾರ ಪೆÇಲೀಸ್ ದೌರ್ಜನ್ಯದ ಮೂಲಕ ರೈತರ ಕೊಲೆ ಮಾಡುತ್ತಿದೆ. ಮಾನವ ಹಕ್ಕು ದಮನ ಮಾಡುತ್ತಿದೆ ಪ್ರಜಾಸತ್ತಾತ್ಮಕವಾಗಿ ಚಳವಳಿ ಮಾಡಲು ದೆಹಲಿಗೆ ಬರುತ್ತಿದ್ದ ರೈತರುಗಳನ್ನು ತಡೆದು ಅವಮಾನಿಸುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತು ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕಿದೆ. ಇಲ್ಲದಿದ್ದರೆ ದೇಶಾಧ್ಯಂತ ರೈತರು ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಕೇಂದ್ರದ ಮಂತ್ರಿಗಳಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಸಂಸದ ಪ್ರತಾಪ್ ಸಿಂಹ ಅವರ ಆಪ್ತ ಸಹಾಯಕ ನಿಮ್ಮ ಮನವಿಯನ್ನು ಸ್ವೀಕರಿಸಿ ಸಂಸದರಿಗೆ ತಲುಪಿಸುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದ ಒತ್ತಾಯ ಪತ್ರವನ್ನು ನೀಡಿದ ಪ್ರತಿಭಟನಾಕಾರರು, ಈ ಮನವಿಯನ್ನು ಕೂಡಲೇ ಪ್ರಧಾನ ಮಂತ್ರಿಗಳ ಗಮನಕ್ಕೆ ತಲುಪಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ಮುಖಂಡರಾದ ಹೆಗ್ಗೂರು ರಂಗರಾಜ್, ಅಂಬಳೆ ಮಂಜುನಾಥ್, ಕಾಟೂರು ಮಾದೇವಸ್ವಾಮಿ, ಶ್ರೀಕಂಠ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.