ಎಂಪಿಆರ್ ಬಗ್ಗೆ ಆರೋಪ ಸಲ್ಲದು

ಹೊನ್ನಾಳಿ,ಏ.30; ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮತ್ತು ಕೆಲವು ಕಾಂಗ್ರೆಸ್ ನಾಯಕರುಗಳು ಎಂ.ಪಿ.ರೇಣುಕಾಚಾರ್ಯ ಅವರ ಜನಪ್ರಿಯತೆ ಸಹಿಸದೇ ಮುಂಬರುವ ವಿಧಾನಸಭಾ ಚುನಾವಣೆಯ ಸೋಲಿನ ಭೀತಿಯಿಂದ ಅನಾವಶ್ಯಕವಾಗಿ ಆರೋಪ ಮಾಡುತ್ತಿದ್ದು ಇದನ್ನು ತಾವು ಖಂಡಿಸುವುದಾಗಿ ಪುರಸಭಾ ಅಧ್ಯಕ್ಷ ಕೆ.ವಿ.ಶ್ರೀಧರ್ ತಿಳಿಸಿದರು.ಇತ್ತೀಚೆಗೆ ತಾಲ್ಲೂಕು ಎನ್.ಎಸ್.ಯು.ಐ. ವತಿಯಿಂದ ನಡೆಸಿದ್ದ ಪತ್ರಿಕಾಗೋಷ್ಠಿಗೆ ಪ್ರತಿಕ್ರಿಯಿಸಿ ಅವರು  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.ಯಾವುದೇ ಹುರುಳಿಲ್ಲದೇ ಶಾಸಕರ ವಿರುದ್ಧ ಕಾಂಗ್ರೆಸ್‌ನವರು ಪತ್ರಿಕೆಗಳಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದು ತಕ್ಷಣವೇ ಇದನ್ನು ನಿಲ್ಲಿಸಬೇಕು. ಸತ್ಯಕ್ಕೆ ದೂರವಾದ ಇಂತಹ ಆರೋಪಗಳನ್ನು ಬಿಜೆಪಿ ಪಕ್ಷವು ಸಹಿಸುವುದಿಲ್ಲ ಎಂದು ತಾಕೀತು ಮಾಡಿದರು.ಎನ್.ಎಸ್.ಯು.ಐ.ನವರೇ ಹೇಳಿದಂತೆ ಮಾಜಿ ಶಾಸಕರು ಮತ್ತು ಅವರ ಸಹೋದರರು ಇದುವರೆಗೂ 11 ಚುನಾವಣೆಗಳನ್ನು ಎದುರಿಸಿದ್ದು 4 ಚುನಾವಣೆಗಳಲ್ಲಿ ಮಾತ್ರವೇ ಗೆಲುವು ಕಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಎಂ.ಪಿ.ರೇಣುಕಾಚಾರ್ಯ ಅವರು ಸ್ಪರ್ಧಿಸಿದ 4 ಚುನಾವಣೆಗಳಲ್ಲಿ ಕೇವಲ 1 ಚುನಾವಣೆಯನ್ನು ಮಾತ್ರವೇ ಸೋತಿದ್ದು ಅದೂ ಬಿಜೆಪಿ ಪಕ್ಷದಿಂದ ಸ್ಪರ್ಧಿಸದೇ ಇದ್ದದ್ದಕ್ಕೆ ಸೋತಿದ್ದಾರೆ. ಅಭಿವೃದ್ಧಿಯ ಪರವಾಗಿ ಜನತೆ ಇದ್ದಿದ್ದಕ್ಕೆ ಮೂರು ಚುನಾವಣೆಗಳ ಗೆಲುವೇ ಸಾಕ್ಷಿ ಎಂದರು. ಮುಂಬರುವ ವಿಧಾನ ಸಭಾ ಚುನಾವಣೆಗಳಲ್ಲೆಲ್ಲಾ ಎಂ.ಪಿ.ರೇಣುಕಾಚಾರ್ಯ ಅವರೇ ಜಯಗಳಿಸಲಿದ್ದಾರೆ ಎಂದು ಘೋಷಿಸಿದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಅವಳಿ ತಾಲ್ಲೂಕುಗಳ ಪ್ರತೀ ಹಳ್ಳಿಗಳಿಗೂ ಸಂಚರಿಸಿ ಉಚಿತ ಔಷಧ,ಆಸ್ಪತ್ರೆಗಳಿಗೆ ಕರೆ ಮಾಡಿ ಬೆಡ್ ವ್ಯವಸ್ಥೆ ಮಾಡಿ ದಿನನಿತ್ಯ 1000ಕ್ಕೂ ಹೆಚ್ಚು ದೂರವಾಣಿ ಕರೆಗಳು ಬಂದರೂ ಪ್ರತಿಯೊಬ್ಬರಿಗೂ ಸ್ಪಂದಿಸಿ ಕೋವಿಡ್ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿದ್ದರು. ಇವರ ಜೊತೆಗೆ ಬಿಜೆಪಿ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಜನತೆಯ ಸೇವೆ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದು ವಿವರಿಸಿದರು. ಮಾಜಿ ಶಾಸಕ ಮತ್ತು ಅವರ ಹಿಂಬಾಲಕರು ವೃಥಾ ಶಾಸಕರ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟು ಎಂ.ಪಿ.ರೇಣುಕಾಚಾರ್ಯ ಅವರು ಯಾವ ರೀತಿ ಜನರ ಪ್ರತಿಯೊಂದು ಕಷ್ಟ-ಸುಖಗಳಿಗೆ ಬಾಗಿಯಾಗುತ್ತಾರೋ ಹಾಗೆ ಮಾಜಿ ಶಾಸಕರು ಇಂತಹ ಕೋವಿಡ್ ಸಂದಿಗ್ಧ ಸಮಯದಲ್ಲಿ ರಾಜಕೀಯ ಕೆಸರೆರಚಾಟ ಮಾಡದೇ ತಾಲ್ಲೂಕಿನ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಸಲಹೆ ನೀಡಿದರು.ಎಂ.ಪಿ.ರೇಣುಕಾಚಾರ್ಯ ಅವರು ಕೇವಲ ಶಾಸಕರಾಗಿರದೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿದ್ದು ರಾಜ್ಯಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದು ಹಲವಾರು ಉಪಚುನಾವಣೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಗೆಲುವು ದೊರಕಿಸಿಕೊಟ್ಟಿದ್ದು ಸಣ್ಣ-ಪುಟ್ಟ ಘಟನೆಗಳಿಂದ ಆರೋಪಿಸುವುದಕ್ಕೆ ಪ್ರೇರಿಪಿಸುವುದನ್ನು ಬಿಡಬೇಕೆಂದು ತಿಳಿಸಿದರು.ಸುದ್ದಿಗೊಷ್ಠಿಯಲ್ಲಿ ಪುರಸಭಾ ಸದಸ್ಯ ಬಾಬು ಹೋಬಳಿದಾರ್,ಬಿಜೆಪಿ ಮುಖಂಡರಾದ ನವೀನ್ ಇಂಚರ,ಗುಂಡ ಚಂದ್ರು,ಎಚ್.ಬಿ.ಸತೀಶ್ ಮತ್ತಿತರರು ಉಪಸ್ಥಿತರಿದ್ದರು.