ಎಂದಿಗೂ ಮರೆಯಲಾಗದ ಕನ್ನಡಿಗರ ಕಣ್ಮಣಿ ಡಾ.ಬಿ.ಎಸ್.ಮಣಿ

ಸುಮಾರು ನಲ್ವತ್ತು ವರ್ಷಗಳ ಹಿಂದೆ ಕನ್ನಡದಲ್ಲಿ “ಸಂಜೆವಾಣಿ” ಎಂಬ ನಾಮಾಂಕಿತದಲ್ಲಿ ಕರ್ನಾಟಕ ರಾಜ್ಯದಲ್ಲಿ ಸಂಜೆ ದೈನಿಕ ಪತ್ರಿಕೆಯನ್ನು ಪ್ರಾರಂಭ ಮಾಡಿ, ಕನ್ನಡ ಮಾಧ್ಯಮ ಕ್ಷೇತ್ರಕ್ಕಿಳಿದು ನೂತನ ಇತಿಹಾಸದ ಜೊತೆಗೆ ಹೊಸ ಆಯಾಮ ನೀಡಿದವರು ಡಾ.ಬಿ.ಎಸ್.ಮಣಿಯವರು.
ಡಾ. ಬಿ. ಎಸ್.ಮಣಿಯವರ ಮಾತೃ ಭಾಷೆ ತಮಿಳು. ತಮಿಳು ಭಾಷೆಯ ಪ್ರಬುದ್ಧ ಬರಹಗಾರರು, ಪತ್ರಕರ್ತರಾಗಿದ್ದ ಡಾ.ಬಿ.ಎಸ್.ಮಣಿ ಅವರಿಗೆ ಕನ್ನಡ ಭಾಷೆ ಹಾಗೂ ಕನ್ನಡ ಮಾಧ್ಯಮದ ಪ್ರಭಾವ ಬೀರಿದ್ದು, ಖ್ಯಾತ ಲೇಖಕ, ಲಂಕೇಶ್ ಪತ್ರಿಕೆಯ ಸಂಪಾದಕರಾಗಿದ್ದ ಪಿ.ಲಂಕೇಶ್ ಅವರ ಸಾಂಗತ್ಯದ ಮೂಲಕ. ಆ ನಂತರ ಕನ್ನಡ ಭಾಷಾ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು-ದೆಸೆ ಒದಗಿಸಿದ್ದು ಡಾ.ಬಿ.ಎಸ್ ಮಣಿಯವರ ಹೆಗ್ಗಳಿಕೆ.
ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ನಾಗಲಾಪುರಂ ಗ್ರಾಮದಲ್ಲಿ ೧೯೩೬ರ ಸೆ.೧೧ ರಂದು ಬಿ.ಎಸ್.ಮಣಿಯವರು ಜನಿಸಿದರು. ಇವರ ಪೂರ್ತಿ ಹೆಸರು ಬಾಲಸುಬ್ರಮಣಿ, ಇವರ ತಂದೆ ತಂಗವೇಲು ನಾಡಾರ್ ಹಾಗೂ ತಾಯಿ ತೇನಾಮಲ್. ಬಿ.ಎಸ್.ಮಣಿಯವರು ಕಿರಿಯ ವಯಸ್ಸಿನಲ್ಲೇ ಮಾತೃವಿಯೋಗ ಅನುಭವಿಸಿದ್ದವರು. ಆ ನೋವಿನ ನಡುವೆಯು ಚಿಕ್ಕ ವಯಸ್ಸಿನಲ್ಲಿ ಅನೇಕ ಕಷ್ಟಗಳನ್ನು ಮೆಟ್ಟಿನಿಂತು ತಮ್ಮ ನೋವು, ಕಷ್ಟಗಳನ್ನು ಎಲ್ಲೂ ತೋರಿಸಿಕೊಳ್ಳದೆ ಎಲ್ಲರಂತೆ ನಗುನಗುತಾ ಎಲ್ಲರೊಂದಿಗೆ ಬೆರಿಯುವ ಅಭ್ಯಾಸ ಮಾಡಿಕೊಂಡಿದ್ದ ಡಾ.ಬಿ.ಎಸ್.ಮಣಿಯವರು ಮೊದಲಿನಿಂದಲೂ ಓದಿನಲ್ಲಿ ಅಪಾರ ಆಸಕ್ತಿ ಮೂಡಿಸಿಕೊಂಡಿದ್ದರು.
೮ನೇ ತರಗತಿಯವರೆಗೆ ಅಲ್ಫೋನ್ಸ್ ಶಾಲೆಯಲ್ಲಿ ಕಲಿತ ಮಣಿಯವರು ೧೦ನೇ ತರಗತಿಯನ್ನು ಚೆನೈನಲ್ಲಿ ಮುಗಿಸಿದ್ದರು. ಮುಂದೆ ಮದ್ರಾಸ್ ಯೂನಿವರ್ಸಿಟಿಯಲ್ಲಿ ಸಾಹಿತ್ಯ ವಿಷಯದಲ್ಲಿ ಎಂ.ಎ. ಮಾಡಿದ್ದಲ್ಲದೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು,ಚಿನ್ನದ ಪದಕ ಪಡೆದಿದ್ದರು.ಡಾ.ಬಿ.ಎಸ್. ಮಣಿಯವರು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ೧೯೬೨ರಲ್ಲಿ ’ದಿನಾ ಸುಡರ್ ಎನ್ನುವ ತಮಿಳು ಪತ್ರಿಕೆ ಪ್ರಾರಂಭಿಸಿದರು.
ಬೆಂಗಳೂರಿನ ವಿಕ್ಟೋರಿಯಾ ಬಡಾವಣೆಯಲ್ಲಿ ಆ ನೂತನ ತಮಿಳು ಪತ್ರಿಕೆ ಕಚೇರಿ ಉದ್ಘಾಟನೆಗಾಗಿ ಬೆಂಗಳೂರಿಗೆ ಬಂದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಾಮರಾಜ್ ನಾದಾರ್ ಅವರು ಕನ್ನಡದಲ್ಲಿ ಪತ್ರಿಕೆ ಪ್ರಾರಂಭಿಸಲು ಡಾ.ಬಿ.ಎಸ್. ಮಣಿಯವರಿಗೆ ಸೂಚಿಸಿದ್ದರು. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಡಾ.ಬಿ.ಎಸ್. ಮಣಿಯವರು ಕರ್ನಾಟಕದಲ್ಲಿ ೧೯೮೨ರ ಡಿಸೆಂಬರ್ ೧೦ರಂದು ’ಸಂಜೆವಾಣಿ’ ನಾಮಾಂಕಿತದಲ್ಲಿ ಸಂಜೆ ಪತ್ರಿಕೆಯನ್ನು ಪ್ರಾರಂಭಮಾಡಿ ಜನರಿಗೆ ಸುಲಭವಾಗಿ ಪತ್ರಿಕೆಯನ್ನು ಸಂಜೆಯೇ ಸಿಗುವ ಹಾಗೆ ಮಾಡಿ ಹೊಸ ಇತಿಹಾಸ ಬರೆದು ರಾಜ್ಯದಲ್ಲಿ ಸಂಚಲನ ಮೂಡಿಸಿದರು.
ಕನ್ನಡ ಪತ್ರಿಕೋದ್ಯಮದಲ್ಲಿ ಯಶಸ್ಸು ಕಂಡ ಸಂಜೆ ದಿನಪತ್ರಿಕೆಗಳು ಬೆರಳೆಕೆಯಷ್ಟು ಮಾತ್ರ, ಸಂಜೆವಾಣಿಗಿಂತಲೂ ಮುನ್ನ ಯಾವ ಪತ್ರಿಕೆಯು ಕೂಡ ಪ್ರಭಲವಾಗಿ ಇರಲಿಲ್ಲ. ಸಂಜೆವಾಣಿ ನಂತರದಲ್ಲಿ ಜನ್ಮತಾಳಿದ್ದ ಹಲವು ಸಂಜೆ ದೈನಿಕಗಳು ಮಾರುಕಟ್ಟೆಯಲ್ಲಿ ಅಷ್ಟಾಗಿ ಗೆಲುವು ಸಾಧಿಸಲಾಗಲಿಲ್ಲ ಎಂಬುದು ಕಟು ಸತ್ಯ.
ಅಂತಹದರಲ್ಲಿಯೂ ೪೦ ವರ್ಷಗಳ ಹಿಂದೆಯೇ, ಓದುಗರಿಗೆ ಅಂದಿನ ಸುದ್ದಿಯನ್ನು ಅಂದೇ ತಲುಪಿಸುವ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದದ್ದು ಸಂಜೆವಾಣಿಯ ಸಾಹಸಕ್ಕೊಂದು ನಿದರ್ಶನ. ಇದಕ್ಕೆ ಪ್ರಮುಖ ಹಾಗೂ ಮೂಲ ಕಾರಣೀಕರ್ತರು ಸಂಜೆವಾಣಿಯ ಸಂಸ್ಥಾಪಕರಾದ ಡಾ.ಬಿ.ಎಸ್. ಮಣಿಯವರು.
ಡಾ.ಬಿ. ಎಸ್. ಮಣಿಯವರು ತಮಿಳು ಸಾಹಿತಿಯೂ ಕೂಡ. ಅವರು ಕಥೆ, ಕಾದಂಬರಿ, ಸಂಶೋಧನಾ ಬರಹಗಳು ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
ಹೀಗೆ ಮಣಿಯವರು ಸಾಹಿತಿಯಾಗಿ, ಪತ್ರಕರ್ತರಾಗಿ ಜನಮನ್ನಣೆ ಗಳಿಸಿದವರು. ತಮ್ಮ ತೀಕ್ಷಣ ಚಿಂತನೆಗಳು, ಸುದ್ದಿಯನ್ನು ಗುರುತಿಸುವ ರೀತಿಯಿಂದಲೂ ಎಲ್ಲರನ್ನೂ ಬೆರಗುಗೊಳಿಸಿದ್ದರು.
ಕನ್ನಡ ಹಾಗೂ ತಮಿಳು ಭಾಷಾ ಬಾಂಧವ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದ ಮಣಿಯವರು ಸಂಜೆವಾಣಿ ಸಂಸ್ಥೆಯಿಂದ ಹೊರತರುತ್ತಿದ್ದ ಕನ್ನಡ ಭಾಷೆಯ ಚಂದನ ಹಾಗೂ ಚೇತನ ಎನ್ನುವ ಹೆಸರಿನ ಮಾಸಿಕ ಪತ್ರಿಯಲ್ಲಿ ಕನ್ನಡದ ಖ್ಯಾತನಾಮರ ಕವನ, ಲೇಖನ, ಕಾದಂಬರಿ, ಕಥೆಗಳನ್ನು ಪ್ರಕಟಿಸಿ ಕನಿಷ್ಠ ಬೆಲೆಯಲ್ಲಿ ಜನರಿಗೆ ತಲುಪಿಸುವ ಮೂಲಕ ಜನರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಕಾರಣರಾದರು. ತಮ್ಮ ಸರಳ, ಸಜ್ಜನಿಕೆ ವ್ಯಕ್ತಿತ್ವದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಇದಕೆಲ್ಲ ಕಾರಣ ಅವರ ದೂರದೃಷ್ಠಿ ಮತ್ತು ಶ್ರಮ ಕಾರಣ ಎಂದರೆ ಅತಿಶಯೋಕ್ತಿಯಲ್ಲ.
ಸಂಜೆ ಬರುವ ಪತ್ರಿಕೆಯಲ್ಲಿ ಪ್ರಭಲವಾಗಿ ಬೆಳದಿರುವ ಪತ್ರಿಕೆಯೆಂದರೆ ಸಂಜೆವಾಣಿ ಪತ್ರಿಕೆ. ಇಂತಹ ದೊಡ್ಡ ಸಂಜೆವಾಣಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಬಿ.ಎಸ್. ಮಣಿಯವರು ಕನ್ನಡ ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ.
ಇವರ ಮಾರ್ಗದರ್ಶನದಲ್ಲಿ ಸಂಜೆವಾಣಿ ಸಂಸ್ಥೆಯಲ್ಲಿ ವೃತ್ತಿ ಮಾಡಿದ ಅನೇಕರು ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಡಾ.ಬಿ.ಎಸ್.ಮಣಿಯವರು ಸ್ಫೂರ್ತಿಯಾಗಿದ್ದಾರೆ.
ರಾಜ್ಯದಲ್ಲಿ ಮೊದಲ ಬಾರಿಗೆ ಅಂತರ್ಜಾಲದಲ್ಲಿ ಕೂಡ ಪತ್ರಿಕೆಯನ್ನು ಸುಲಭವಾಗಿ ಓದುವಂತಹ ಅವಕಾಶ ಮಾಡಿಕೊಟ್ಟು ಪತ್ರಿಕೆ ಓದುಗರಿಗೆ ಇನ್ನಷ್ಟು ಹತ್ತಿರವಾದದ್ದು ಸಂಜೆವಾಣಿ ಪತ್ರಿಕೆ. ಇಂತಹ ಅವಕಾಶ ಮಾಡಿಕೊಟ್ಟ ಡಾ.ಬಿ.ಎಸ್. ಮಣಿಯವರು ಇಂತಹ ಅನೇಕ ಕೊಡುಗೆಗಳನ್ನು ಕನ್ನಡ ಪತ್ರಿಕೋದ್ಯಮಕ್ಕೆ ನೀಡಿದವರು. ಅವರು ಯಾವುದನ್ನೂ, ಯಾರಿಂದಲೂ ಆಸೆ ಪಟ್ಟವರಲ್ಲ. ಸಾಹಿತಿಯಾಗಿ, ಪತ್ರಕರ್ತರಾಗಿ ಜನಮನ್ನಣೆ ಗಳಿಸಿದ್ದ ಮಣಿಯವರಿಗೆ ಬಯಸದೆ ಬಂದಾ ಭಾಗ್ಯ ಎನ್ನುವಂತೆ ಅವರ ಕಾಯಕವನ್ನು ಮೆಚ್ಚಿ ತಿರುಪತಿ ಯೂನಿವರ್ಸಿಟಿ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ.
ಕರ್ನಾಟಕದ ರಾಜಧಾನಿ ಬೆಂಗಳೂರು ಅಲ್ಲದೆ ಒಬ್ಬತ್ತು ಕಡೆಗೆ ಸ್ಥಾನಿಕ ಕಚೇರಿಗಳನ್ನು ಸ್ಥಾಪನೆ ಮಾಡಿದ ಡಾ.ಬಿ.ಎಸ್. ಮಣಿಯವರು ಸಂಜೆವಾಣಿ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಹಾಗೆ ಎಲ್ಲರ ಹತ್ತಿರ ಅಷ್ಟೇ ಶಿಸ್ತು ಬದ್ದವಾಗಿ ಕೆಲಸ ತೆಗೆದುಕೊಳ್ಳುತ್ತಿದ್ದರು ಎಂದರೆ ತಪ್ಪಾಗಲಾರದು.
ಕರ್ನಾಟಕದಲ್ಲಿ ಅತೀ ದೊಡ್ಡ ಹೆಮ್ಮರವಾಗಿ ಬೆಳೆದು ಮನೆಮಾತಾಗಿರುವ ಸಂಜೆವಾಣಿ ಪತ್ರಿಕೆಯ ಸಂಸ್ಥಾಪಕರಾದ ಡಾ.ಬಿ.ಎಸ್. ಮಣಿಯವರು ೨೦೧೫ ರ ಮೇ ೦೩ ರಂದು ಅಸ್ತಂಗತರಾದರು.
ಡಾ.ಬಿ ಎಸ್ ಮಣಿಯವರ ಪುತ್ರರಾದ ಬಿ.ಟಿ.ಅಮುದನ್ ಅವರು ಕನ್ನಡದ ಮಾಣಿಕ್ಯವೆಂದರೆ ತಪ್ಪಾಗಲಾರದು, ಪ್ರಸ್ತುತ ಸಂಜೆವಾಣಿ ಸಂಸ್ಥೆಯನ್ನು ರಾಜ್ಯದಲ್ಲಿ ಬಹಳ ಅಚ್ಚುಕಟ್ಟಾಗಿ ಬಿ.ಟಿ. ಅಮುದನ್ ಅವರು ಮುಂದುವರಿಸುತ್ತಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ಹೆಸರುವಾಸಿಯಾಗಿರುವ ಸಂಜೆವಾಣಿ ಪತ್ರಿಕೆಯನ್ನು ಕೊಡುಗೆಯಾಗಿ ನೀಡಿ ನಾವು ಎಂದಿಗೂ ಮರೆಯಲಾಗದ ಕನ್ನಡಿಗರ ಕಣ್ಮಣಿಯಾಗಿರುವ ಡಾ.ಬಿ.ಎಸ್ ಮಣಿಯವರ ಸ್ಮರಣಾರ್ಥವಾಗಿ ಈ ಲೇಖನ ಅರ್ಪಣೆ.