ಎಂದಿಗೂ ಬತ್ತದ ಭೈರವೇಶ್ವರ ಕಲ್ಯಾಣಿ


ಜಾಲಿಹಾಳ್ ರಾಜಸಾಬ್
ಸಿರುಗುಪ್ಪ, ನ.09: ತಾಲೂಕಿನ ಭೈರಾಪುರ ಗ್ರಾಮದಲ್ಲಿರುವ ಐತಿಹಾಸಿಕ ಕಾಲ ಭೈರವೇಶ್ವರನ ಕಲ್ಯಾಣಿಯು ಬೇಸಿಗೆ ಕಾಲದಲ್ಲಿಯೂ ಬತ್ತದೆ ಇರುವುದು ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ.
ಒಂದು ಸಾವಿರ ವರ್ಷದ ಹಿಂದೆ ನಿರ್ಮಿಸಲಾಗಿದೆ ಎಂದು ಹೇಳಲಾಗುವ ಈ ಕಲ್ಯಾಣಿಯು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದ್ದು, ಭೂ ಮಟ್ಟದಿಂದ ಕೆಳಭಾಗದಲ್ಲಿದ್ದು, ಕಲ್ಯಾಣಿಯ ಕೆಳಗಡೆ ಹೋಗಲು ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ. ಈ ಕಲ್ಯಾಣಿಯ ಒಂದು ಭಾಗದಲ್ಲಿ ಕಾಲಭೈರವೇಶ್ವರನ ದೇವಸ್ಥಾನವಿದ್ದು, ಪಕ್ಕದಲ್ಲಿಯೇ ಈಶ್ದರ, ನಂದಿಯ ವಿಗ್ರಹಗಳಿಗೆ ನಂತರ ಕಲ್ಯಾಣಿಯು 2 ಅಂತಸ್ತುಗಳ ರಚನೆಯಿದ್ದು, ಇಂದಿಗೂ ಈ ಭಾವಿ ಸುಸ್ಥಿತಿಯಲ್ಲಿದ್ದು, ಸದಾ ಸಿಹಿನೀರಿನಿಂದ ತುಂಬಿದ್ದು, ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾರಂಭ ಮಾಡಿದ ನಂತರ ಈ ಕಲ್ಯಾಣಿಯ ನೀರಿನ ಬಳಕೆಯನ್ನು ಗ್ರಾಮಸ್ಥರು ಮಾಡುತ್ತಿಲ್ಲ. 
ಈ ಕಲ್ಯಾಣಿಯ ಮತ್ತೊಂದು ವಿಶೇಷತೆಯೆಂದರೆ ಈ  ಕಲ್ಯಾಣಿಯಲ್ಲಿ ತತ್ತಿ ಮತ್ತು ಲಾರ್ವ ಹುಳಗಳನ್ನು (ಬಾಲಹುಳ) ತಿಂದು ಬದುಕುವ ಲಕ್ಷಾಂತರ ಮೀನುಗಳು ನೈಸರ್ಗಿಕವಾಗಿ ಬೆಳೆದಿದ್ದು, ಈ ಕಲ್ಯಾಣಿಯಲ್ಲಿ ಬೆಳೆದಿರುವ ಮೀನುಗಳನ್ನು ಲಾರ್ವ ಮತ್ತು ಸೊಳ್ಳೆಗಳ ನಿವಾರಣೆಗೆ ಆರೋಗ್ಯ ಇಲಾಖೆ ಸಿಬ್ಬಂದಿಯೂ ತೆಗೆದುಕೊಂಡು ಹೋಗಿ ಕೆರೆ, ಭಾವಿ, ಹಳ್ಳ ಸೇರಿದಂತೆ ವಿವಿಧ ನೀರಿನ ಮೂಲಗಳಿಗೆ ಬಿಡುತ್ತಿರುವುದು ಸಾಮಾನ್ಯವಾಗಿದೆ. 
ಈ ಕಲ್ಯಾಣಿಯಲ್ಲಿ ಢೆಂಘಿ ಜ್ವರವನ್ನು ಹರಡಿಸುವ ಈಡೀಸ್ ಹೆಣ್ಣು ಸೊಳ್ಳೆ ಸೇರಿದಂತೆ ಇತರೆ ಸೊಳ್ಳೆಗಳ ಸಂತತಿಯನ್ನು ನಾಶಮಾಡುವ ಗಪ್ಪಿ ಮತ್ತು ಗಾಂಭೂಷಿಯ ಮೀನುಗಳು ಲಕ್ಷಾಂತರ ಸಂಖ್ಯೆಯಲ್ಲಿ ಬೆಳೆದಿವೆ. ಇಲ್ಲಿನ ಮೀನುಗಳನ್ನು ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯು ತಮ್ಮ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕರೂರು, ದರೂರು, ಉತ್ತನೂರು, ಊಳೂರು, ಹೆಚ್.ಹೊಸಳ್ಳಿ, ಹಾಗಲೂರು, ಭೈರಾಪುರ, ಗೋಸಬಾಳು, ಬೂದುಗುಪ್ಪ, ಮಾಟಸೂಗೂರು, ಶಾನವಾಸಪುರ, ದರೂರು ಕ್ಯಾಂಪ್, ಕೂರಿಗನೂರು ಮುಂತಾದ ಕಡೆಯಿರುವ ಕೆರೆ, ಭಾವಿ, ಹಳ್ಳ ಸೇರಿದಂತೆ ಇತರೆ ನೀರಿನ ತಾಣಗಳಿಗೆ ಬಿಟ್ಟಿದ್ದಾರೆ.
ಇದರಿಂದಾಗಿ ಕೆಲವು ಗ್ರಾಮಗಳಲ್ಲಿ ಢೆಂಘಿ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳ ಕಾಟ ನಿಯಂತ್ರಣಕ್ಕೆ ಬಂದಿದ್ದು, ಕಲ್ಯಾಣಿಯಲ್ಲಿ ಸದಾ ನೀರಿರುವುದರಿಂದ ಈ ಮೀನುಗಳು ಕೋಟ್ಯಾಂತರ ಸಂಖ್ಯೆಯಲ್ಲಿ ವೃದ್ಧಿಹೊಂದಿದ್ದು, ಆರೋಗ್ಯ ಇಲಾಖೆಯವರು ಈ ಕಲ್ಯಾಣಿಯಿಂದ ಗಪ್ಪಿ ಮತ್ತು ಗಾಂಭೂಷಿಯ ಮೀನುಗಳನ್ನು ತೆಗೆದುಕೊಂಡು ಹೋಗಿ ಆರೋಗ್ಯ ಕೇಂದ್ರಗಳಲ್ಲಿನ ತೊಟ್ಟಿಗಳಲ್ಲಿ ಬಿಟ್ಟು ಪೋಷಿಸುತ್ತಿದ್ದಾರೆ.
ಜಾತ್ರೆ, ಉರುಸು, ಮೊಹರಂ ಆಚರಣೆ ಸೇರಿದಂತೆ ವಿವಿದ ದಾರ್ಮಿಕ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಈ ಕಲ್ಯಾಣಿಯಲ್ಲಿ ವಿಶೇಷ ಪೂಜೆಯನ್ನು ನಡೆಸುವುದು ವಿಶೇಷವಾಗಿರುತ್ತದೆ. ಇಂದಿಗೂ ಈ ಕಲ್ಯಾಣಿಯು ತನ್ನ ವಿಶೇಷತೆಯನ್ನು ಉಳಿಸಿಕೊಂಡು ಬಂದಿದೆ.