ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ಮಾಡುವುದಿಲ್ಲ : ಎನ್. ನಟರಾಜು

ಕೆ.ಆರ್.ಪೇಟೆ, ಅ.30: ಪಟ್ಟಣದ ಪುರಸಭೆಯಲ್ಲಿ ಬಿಜೆಪಿಯಿಂದ ಜಯಗಳಿಸಿದ ಏಕೈಕ ಸದಸ್ಯನಾದ ನಾನು ಪಕ್ಷ ವಿರೋಧಿ ಚಟುವಟಿಕೆಯನ್ನು ಎಂದಿಗೂ ಮಾಡುವುದಿಲ್ಲ ಎಂದು ಪುರಸಭೆಯ ಬಿಜೆಪಿ ಸದಸ್ಯ ಎನ್. ನಟರಾಜು ತಿಳಿಸಿದ್ದಾರೆ.
ನಾಳಿನ ಪುರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧ್ಯಕ್ಷರ ಚುನಾವಣೆಯ ಮೇಲೆ ಬಿಜೆಪಿಯ ನಟರಾಜು ಅವರಿಗೆ ಮತಹಾಕುವಂತೆ ತನ್ನ ಸದಸ್ಯರಿಗೆ ವಿಪ್ ನೀಡಿರುವ ಹಿನ್ನೆಲೆಯಲ್ಲಿ ನಟರಾಜು ರಾಜ್ಯ ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡರ ಗೃಹ ಕಚೇರಿಯಿಂದ ವೀಡಿಯೋ ಸಂದೇಶ ಬಿಡುಗಡೆ ಮಾಡಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ನಾನು ಕಳೆದ 16 ವರ್ಷಗಳಿಂದ ಸಂಘಪರಿವಾರದ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಎ.ಬಿ.ವಿ.ಪಿ ಮತ್ತು ಹಿಂದೂ ಜಾಗರಣಾ ವೇದಿಕೆಗಳಲ್ಲೂ ಕೆಲಸ ಮಾಡಿದ್ದೇನೆ. ಪಟ್ಟಣದಲ್ಲಿ ಬಿಜೆಪಿಗೆ ತಳಹದಿಯೇ ಇರಲಿಲ್ಲ. ಅಂಥಹ ಸಂಕಷ್ಠದ ಕಾಲದಲ್ಲಿ ಬಿಜೆಪಿ ಸೇರಿ ಪಕ್ಷ ಸಂಘಟನೆ ಮಾಡಿದ್ದೇನೆ. ಬಿಜೆಪಿಯಿಂದ ಗೆದ್ದಿರುವ ಏಕೈಕ ಸದಸ್ಯನಾಗಿದ್ದು ನಾನೂ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದರೆ ಪುರಸಭೆಯ ಅಧ್ಯಕ್ಷನಾಗಲು ನಾನು ಕಾಂಗ್ರೆಸ್ ಬೆಂಬಲ ಯಾಚಿಸಿಲ್ಲ ಅವರ ಸಂಪರ್ಕದಲ್ಲಿಯೂ ನಾನು ಇಲ್ಲ ಸುಮ್ಮನೆ. ರಾಜಕೀಯ ಗೊಂದಲ ಹುಟ್ಟಿಸಿ ಸಚಿವ ನಾರಾಯಣಗೌಡರ ಹೆಸರಿಗೆ ಮಸಿ ಬಳಿಯಲು ಕಾಂಗ್ರೆಸ್ ನನ್ನ ಹೆಸರನ್ನು ಬಳಕೆ ಮಾಡಿಕೊಂಡಿದೆ. ಇದು ರಾಜಕೀಯ ದುರುದ್ದೇಶದ ನಡೆ. ಇಂಥಹ ನಡವಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಪಕ್ಷದ ವರಿಷ್ಠರ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದು ನಟರಾಜ್ ತಮ್ಮ ವೀಡಿಯೂ ಸಂದೇಶದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಸಚಿವ ನಾರಾಯಣಗೌಡ ಕಾಂಗ್ರೆಸ್ ಪಕ್ಷ ಇಂಥಹ ಕೀಳು ಮಟ್ಟದ ರಾಜಕಾರಣಕ್ಕೆ ಇಳಿಯಬಾರದು, ಇಂಥಹ ಘಟನೆಗಳು ನಡೆದರೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಇವರುಗಳನ್ನು ಯಾರೂ ಬೆಂಬಲ ಕೇಳಿಲ್ಲ, ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಇಂಥಹ ಕೀಳು ಮಟ್ಟಕ್ಕೆ ಇಳಿಯಬಾರದು ಇದು ಅವರಿಗೆ ಶೋಭೆ ತರುವುದಿಲ್ಲ, ನಮಗೂ ತಂತ್ರಗಾರಿಕೆ ರಾಜಕಾರಣ ಗೊತ್ತಿದೆ, ಮುಂದಿನ ದಿನಗಳಲ್ಲಿ ಅದನ್ನು ನಾವು ಜನತೆಗೆ ತಿಳಿಸಲಿದ್ದೇವೆ ಎಂದು ತಿಳಿಸಿದರು.
ಈ ನಡುವೆ ಕಾಂಗ್ರೆಸ್ ಪಕ್ಷದ ನಡೆಯ ಬಗ್ಗೆ ಅನುಮಾನ ಮೂಢಿ ಜೆಡಿಎಸ್ ಪಕ್ಷವು ಮಹಾದೇವಿ ನಂಜುಂಡ ಹಾಗೂ ಗಾಯಿತ್ರಿಯವರಿಗೆ ಮತ ಚಲಾಯಿಸುವಂತೆ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದು ಅಂತಿಮವಾಗಿ ಯಾವ ರೀತಿಯ ಫಲಿತಾಂಶ ಹೊರಬೀಳಲಿದೆ ಎಂದು ಕಾದು ನೋಡಬೇಕಾಗಿದೆ.