ಎಂಡಿ,ಸಿಇಒ ಹತ್ಯೆ; ಮೂವರು ಹಂತಕರ ಬಂಧನ

ಬೆಂಗಳೂರು,ಜು.೧೨-ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದ ಏರೋನಿಕ್ಸ್ ಇಂಟರ್‌ನೆಟ್ ಕಂಪನಿ (ಏರೋನಿಕ್ಸ್ ಮೀಡಿಯಾ ಸಂಸ್ಥೆ) ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ (ಸಿಇಒ) ವಿನುಕುಮಾರ್ ಅವರ ಹತ್ಯೆ ಪ್ರಕರಣದ ಮೂವರು ಹಂತಕರನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಅಮೃತಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬನ್ನೇರುಘಟ್ಟ ರಸ್ತೆ ಚಿಕ್ಕನಹಳ್ಳಿ ಟಿಕ್ ಟಾಕ್ ಸ್ಟಾರ್ ಶಬರಿಷ್ ಅಲಿಯಾಸ್ ಫಿಲಿಕ್ಸ್ (೨೭), ರೂಪೇನಾ ಅಗ್ರಹಾರದ ವಿನಯ್ ರೆಡ್ಡಿ (೨೩) ಹಾಗೂ ಮಾರೇನಹಳ್ಳಿ ಸಂತು ಅಲಿಯಾಸ್ ಸಂತೋಷ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.ಅಮೃತಹಳ್ಳಿಯ ಪಂಪ ಬಡಾವಣೆಯ ೬ನೇ ಅಡ್ಡ ರಸ್ತೆಯಲ್ಲಿರುವ ಏರೋನಿಕ್ಸ್ ಇಂಟರ್‌ನೆಟ್ ಕಂಪನಿಯ ಕಚೇರಿಗೆ ನಿನ್ನೆ ಸಂಜೆ ನುಗ್ಗಿದ್ದ ಬಂಧಿತ ಮೂವರು ಆರೋಪಿಗಳು ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಸಿಇಒ ವಿನುಕುಮಾರ್ ಇಬ್ಬರನ್ನು ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿ. ಮಾಡಿದ್ದರು.ಕೊಲೆ ಮಾಡಿದ ಬಳಿಕ ಕಚೇರಿಯ ಹಿಂದಿನ ಬಾಗಿಲಿನ ಮೂಲಕ ಓಡಿ ಹೋಗಿದ್ದರು. ಕಚೇರಿಯ ಸಿಬ್ಬಂದಿಯೇ ಫಣೀಂದ್ರ ಹಾಗೂ ವಿನುಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.ಪರಾರಿಯಾಗಿದ್ದ ಆರೋಪಿಗಳು ಕುಣಿಗಲ್‌ನಲ್ಲಿ ತಲೆಮರೆಸಿಕೊಂಡಿದ್ದು ತಕ್ಷಣವೇ ಕಾರ್ಯಾಚರಣೆ ಕೈಗೊಂಡು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ ಎಂದರು.
ಪ್ರಕರಣದ ವಿವರ:
ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಫೆಲಿಕ್ಸ್‌ನನ್ನು ಸದಾ ನಿಂದಿಸುತ್ತಿದ್ದ ಫಣೀಂದ್ರ ಇತ್ತೀಚೆಗೆ ಆತನನ್ನು ಕೆಲಸದಿಂದಲೂ ತೆಗೆದು ಹಾಕಿದ್ದರು. ಅದೇ ದ್ವೇಷಕ್ಕೆ ಫೆಲಿಕ್ಸ್, ಫಣೀಂದ್ರರನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದ.ಇನ್ನಿಬ್ಬರು ಆರೋಪಿಗಳಾದ ವಿನಯ್ ರೆಡ್ಡಿ ಹಾಗೂ ಶಿವುಗೆ ಫಣೀಂದ್ರನ ಮೇಲೆ ಯಾವುದೇ ದ್ವೇಷವಿರಲಿಲ್ಲ. ಆದರೆ ಫೆಲಿಕ್ಸ್ ಮಾತು ಕೇಳಿ ಹತ್ಯೆಗೆ ಕೈ ಜೋಡಿಸಿ ಫಣೀಂದ್ರನನ್ನು ಕೊಲ್ಲಲು ಬಂದಿದ್ದರು.ವಿನು ಕುಮಾರ್‌ನನ್ನು ಹತ್ಯೆ ಮಾಡುವ ಉದ್ದೇಶವಿರಲಿಲ್ಲ. ಆದರೆ ಫಣೀಂದ್ರನ ಹತ್ಯೆ ವೇಳೆ ತಡೆಯಲು ಹೋಗಿದ್ದ ವಿನು ಕುಮಾರ್? ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದರು.ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿಗಳ ಪತ್ತೆಗಾಗಿ ಈಶಾನ್ಯ ವಿಭಾಗದ ಪೊಲೀಸರ ಐದು ತಂಡ ರಚಿಸಲಾಗಿತ್ತು. ಆರೋಪಿಗಳ ಮೊಬೈಲ್ ನಂಬರ್ ಟವರ್ ಡಂಪ್ ಆಧರಿಸಿ ಬೆನ್ನತ್ತಿದ ಪೊಲೀಸರು ಅಂತಿಮವಾಗಿ ಕುಣಿಗಲ್ ಬಳಿ ಬಂಧಿಸಿದ್ದಾರೆ.