ಎಂಟು ರಾಷ್ಟ್ರ ಪ್ರಶಸ್ತಿ ವಿಜೇತ ಶ್ಯಾಮ್ ಬೆನಗಲ್ ರ ಎರಡೂ ಕಿಡ್ನಿ ವೈಫಲ್ಯ: ಮನೆಯಲ್ಲಿಯೇ ಡಯಾಲಿಸಿಸ್ ನಡೆಯುತ್ತಿದೆ

ಶ್ಯಾಮ್ ಬೆನಗಲ್ ಅವರು ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಹೊಂದಿದ ಸಿನಿಮಾ ನಿರ್ದೇಶಕರು.
ನಿರ್ಮಾಪಕ- ನಿರ್ದೇಶಕ ಶ್ಯಾಮ್ ಬೆನಗಲ್ ಅವರ ಎರಡೂ ಕಿಡ್ನಿಗಳು ವಿಫಲವಾಗಿವೆ. ಮೂರು ದಿನಗಳ ಹಿಂದಷ್ಟೇ ವೈದ್ಯಕೀಯ ಪರೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಮನೆಯಲ್ಲೇ ಅವರ ಚಿಕಿತ್ಸೆ ನಡೆಯುತ್ತಿದ್ದು, ಡಯಾಲಿಸಿಸ್ ಕೂಡ ನಡೆಯುತ್ತಿದೆ.
ಶ್ಯಾಮ್ ಬೆನಗಲ್ ಅವರ ಜನನ ೧೪ ಡಿಸೆಂಬರ್ ೧೯೩೪. ಈಗ ಅವರಿಗೆ ೮೮ ವರ್ಷ ಪ್ರಾಯ.ಒಬ್ಬ ಭಾರತೀಯ ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡವರು.
ಸಾಮಾನ್ಯವಾಗಿ ಸಮಾನಾಂತರ ಸಿನಿಮಾದ ಪ್ರವರ್ತಕ ಎಂದು ಅವರನ್ನು ಪರಿಗಣಿಸುತ್ತಾರೆ.
ಬೆನಗಲ್ ಅವರೇ ತಮ್ಮ ಅನಾರೋಗ್ಯವನ್ನು ಖಚಿತಪಡಿಸಿದ್ದಾರೆ.
ನಾನು ಆರೋಗ್ಯವಾಗಿಲ್ಲ. ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ನನ್ನ ಔಷಧಿ ಶುಶ್ರೂಷೆ ನಡೆಯುತ್ತಿದೆ. ಇತ್ತೀಚೆಗೆ ಮನೆಯಲ್ಲಿಯೇ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದಿದ್ದಾರೆ.
ಅವರ ಆಫೀಸಿನವರು ಹೇಳುತ್ತಾರೆ – ಕೆಲವು ದಿನಗಳ ಹಿಂದಿನವರೆಗೂ ಅವರ ಆರೋಗ್ಯ ಚೆನ್ನಾಗಿತ್ತು:
ಶ್ಯಾಮ್ ಬೆನೆಗಲ್ ಅವರ ಆಫೀಸಿನವರು ಪ್ರತಿಕ್ರಿಯಿಸಿ ಕೆಲವು ದಿನಗಳ ಹಿಂದಿನವರೆಗೂ ಸಾಹೇಬರ ಆರೋಗ್ಯ ಚೆನ್ನಾಗಿತ್ತು .ಆದರೆ ಕಳೆದ ಎರಡು-ಮೂರು ದಿನಗಳಿಂದ ಅವರು ಆಫೀಸಿಗೆ ಬರುತ್ತಿಲ್ಲ ಎಂಬುದಾಗಿ ಹೇಳಿದ್ದಾರೆ. ವಾಸ್ತವವಾಗಿ, ಅವರು ನಿರಂತರವಾಗಿ ತಮ್ಮ ಹೊಸ ಯೋಜನೆಗಳನ್ನು ಯೋಜಿಸುತ್ತಿದ್ದರು. ಅವರು ಬಾಂಗ್ಲಾದೇಶ ಸರ್ಕಾರದೊಂದಿಗೆ ’ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್’ ಎಂಬ ಚಲನಚಿತ್ರವನ್ನು ಮಾಡಲು ಸಿದ್ಧರಾಗಿದ್ದಾರೆ. ಈ ಫಿಲ್ಮ್ ಬಾಂಗ್ಲಾದೇಶದ ಮೊದಲ ಅಧ್ಯಕ್ಷರಾದ ಮುಜಿಬುರ್ ರೆಹಮಾನ್ ಅವರ ಜೀವನವನ್ನು ಆಧರಿಸಿದೆ. ಆದರೆ, ವಿವಾದಗಳಿಂದಾಗಿ ಬಿಡುಗಡೆ ನಿರಂತರವಾಗಿ ಮುಂದೂಡುತ್ತಲೇ ಇದೆ. ಮುಜೀಬ್ ಬಿಟ್ಟರೆ ಬೇರೆ ಯಾವುದೇ ಯೋಜನೆ ಆರಂಭಿಸಿಲ್ಲ.
ಶ್ಯಾಮ್ ಅವರ ಫಿಲ್ಮ್ ಗಳು ಎಂಟು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿವೆ:
ಶ್ಯಾಮ್ ಬೆನಗಲ್ ಅವರು ಜುಬೈದಾ, ದಿ ಮೇಕಿಂಗ್ ಆಫ್ ದಿ ಮಹಾತ್ಮ, ನೇತಾಜಿ ಸುಭಾಷ್ ಚಂದ್ರ ಬೋಸ್: ದಿ ಫಾರ್ಗಾಟನ್ ಹೀರೋ, ಮಂಡಿ, ಆರೋಹನ್, ವೆಲ್ ಕಮ್ ಟು ಸಜ್ಜನಪುರ್….. ಮುಂತಾದ ಹತ್ತಾರು ಉತ್ತಮ ಚಲನಚಿತ್ರಗಳನ್ನು ಮಾಡಿದ್ದಾರೆ. ಅವರ ಚಿತ್ರಗಳು ೮ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿವೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಶ್ಯಾಮ್ ೧೯೭೪ ರ ಅಂಕುರ್ ಫಿಲ್ಮ್ ನ ಮೂಲಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.
೨೪ ಚಲನಚಿತ್ರಗಳು, ೪೫ ಸಾಕ್ಷ್ಯಚಿತ್ರಗಳು ಮತ್ತು ೧೫೦೦ ಜಾಹೀರಾತು ಚಲನಚಿತ್ರಗಳು:
ಶ್ಯಾಮ್ ಇದುವರೆಗೆ ೨೪ ಚಲನಚಿತ್ರಗಳು, ೪೫ ಸಾಕ್ಷ್ಯಚಿತ್ರಗಳು ಮತ್ತು ೧೫ ಜಾಹೀರಾತು ಫಿಲ್ಮ್ ಗಳನ್ನು ಮಾಡಿದ್ದಾರೆ. ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ೧೯೭೬ ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಇದಲ್ಲದೇ ಅವರ ಖಾತೆಯಲ್ಲಿ ೮ ರಾಷ್ಟ್ರೀಯ ಪ್ರಶಸ್ತಿಗಳಿವೆ. ಅವರು ಗರಿಷ್ಠ ಸಂಖ್ಯೆಯ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಹೊಂದಿದ್ದಾರೆ. ೨೦೦೫ ರಲ್ಲಿ ಭಾರತೀಯ ಚಿತ್ರರಂಗದ ಅತಿದೊಡ್ಡ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸಹ ಅವರಿಗೆ ನೀಡಲಾಗಿದೆ. ಅವರಿಗೆ ೧೯೯೧ ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು.
ಶ್ಯಾಮ್ ಬೆನಗಲ್ ಗುರುದತ್ ಅವರ ಸೋದರಸಂಬಂಧಿ:
ಶ್ಯಾಮ್ ಸುಂದರ್ ಬೆನಗಲ್ ಅವರು ಹೈದರಾಬಾದ್‌ನ ಮಧ್ಯಮ ವರ್ಗದ ಕುಟುಂಬದಲ್ಲಿ ೧೪ ಡಿಸೆಂಬರ್ ೧೯೩೪ ರಂದು ಜನಿಸಿದರು. ಅವರು ಪ್ರಸಿದ್ಧ ನಟ ಮತ್ತು ಚಲನಚಿತ್ರ ನಿರ್ಮಾಪಕ ಗುರುದತ್ ಅವರ ಸೋದರಸಂಬಂಧಿ. ಶ್ಯಾಮ್ ಅವರ ತಂದೆ ಸ್ಟಿಲ್ ಫೋಟೋಗ್ರಫಿಯಲ್ಲಿ ಒಲವು ಹೊಂದಿದ್ದರು.
ಶ್ಯಾಮ್ ಕೂಡ ಆಗಾಗ ಮಕ್ಕಳ ಫಿಲ್ಮ್ ತೆಗೆಯುತ್ತಿದ್ದರು. ಅರ್ಥಶಾಸ್ತ್ರದಲ್ಲಿ ಎಂ.ಎ ಮಾಡಿದ ನಂತರ ಅವರು ಛಾಯಾಗ್ರಹಣ ಮಾಡಲು ಪ್ರಾರಂಭಿಸಿದರು. ಮೊದಲ ಫಿಲ್ಮ್ ‘ಅಂಕುರ್’ ಮಾಡುವ ಮುನ್ನ ಅವರು ಆ?ಯಡ್ ಏಜೆನ್ಸಿಗಳಿಗಾಗಿ ಹಲವು ಆ?ಯಡ್ ಫಿಲಂಗಳನ್ನು ಮಾಡಿದ್ದರು. ಚಲನಚಿತ್ರಗಳು ಮತ್ತು ಜಾಹೀರಾತುಗಳನ್ನು ಮಾಡುವ ಮೊದಲು, ಶ್ಯಾಮ್ ಕಾಪಿರೈಟರ್ ಆಗಿ ಕೆಲಸ ಮಾಡುತ್ತಿದ್ದರು.
ಬಾಲಿವುಡ್ ನಲ್ಲಿ ಅನೇಕ ಹಿರಿಯ ನಟರನ್ನು ಲಾಂಚ್ ಮಾಡಿದವರು:
ಬೆನಗಲ್ ಅವರ ಚಲನಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ನಾಸಿರುದ್ದೀನ್ ಶಾ, ಓಂ ಪುರಿ, ಅಮರೀಶ್ ಪುರಿ, ಅನಂತ್ ನಾಗ್, ಶಬಾನಾ ಅಜ್ಮಿ, ಸ್ಮಿತಾ ಪಾಟೀಲ್ ಮತ್ತು ಛಾಯಾಗ್ರಾಹಕ ಗೋವಿಂದ್ ನಿಹಲಾನಿ ಸೇರಿದಂತೆ ಕೆಲವು ಅತ್ಯುತ್ತಮ ನಟರನ್ನು ನಿರ್ಮಿಸಿದವು. ಜವಾಹರಲಾಲ್ ನೆಹರು ಮತ್ತು ಸತ್ಯಜಿತ್ ರೇ ಅವರ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ ದೂರದರ್ಶನಕ್ಕಾಗಿ ಅವರು ’ಯಾತ್ರಾ’, ’ಕಥಾ ಸಾಗರ್’ ಮತ್ತು ’ಭಾರತ್ ಏಕ್ ಖೋಜ್’ ಧಾರಾವಾಹಿಗಳನ್ನು ನಿರ್ದೇಶಿಸಿದ್ದರು.
ಮುಜೀಬ್: ದಿ ಮೇಕಿಂಗ್ ಆಫ್ ಎ ನೇಷನ್: ಶ್ಯಾಮ್ ಬೆನಗಲ್ ಫಿಲ್ಮ್ ನ ಟ್ರೈಲರ್ ಬಿಡುಗಡೆಯಾದ ತಕ್ಷಣ ಟೀಕೆ ಕಾಣಿಸಿದೆ:
ಚಿತ್ರನಿರ್ಮಾಪಕ ಶ್ಯಾಮ್ ಬೆನಗಲ್ ಅವರು ಮುಂಬರುವ ಜೀವನಾಧಾರಿತ ಫಿಲ್ಮ್ ’ಮುಜಿಬ್ – ದಿ ಮೇಕಿಂಗ್ ಆಫ್ ಎ ನೇಷನ್’ ಟ್ರೇಲರ್ ನ್ನು ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ಜನರು ಈ ಟ್ರೇಲರ್ ನ್ನು ಟೀಕಿಸುತ್ತಿದ್ದಾರೆ. ಫಿಲ್ಮ್ ನ ಬಗ್ಗೆ ಸರಿಯಾದ ಸಂಶೋಧನೆ ನಡೆದಿಲ್ಲ ಎನ್ನುತ್ತಾರೆ ಜನ. ಮುಜೀಬ್ ಫಿಲ್ಮ್ ನ್ನು ಭಾರತ ಮತ್ತು ಬಾಂಗ್ಲಾದೇಶ ಸರ್ಕಾರವು ಜಂಟಿಯಾಗಿ ಮಾಡಿದೆ. ಆದರೂ ಫಿಲ್ಮ್ ನ ಬಿಡುಗಡೆ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ.