ಎಂಟು ಮಂದಿ ಸಜೀವ ದಹನ

ಲಕ್ನೋ,ಡಿ.೧೦-ಲಾರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಬೆಂಕಿ ತಗುಲಿ ಸುಟ್ಟು ಭಸ್ಮವಾಗಿ ಮದುವೆಗೆ ತೆರಳುತ್ತಿದ್ದ ಎಂಟು ಮಂದಿ ದಾರುಣ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬರೇಲಿ-ನೈನಿತಾಲ್ ಹೆದ್ದಾರಿಯಲ್ಲಿ ನಡೆದಿದೆ.ಭೋಜಿಪುರ ಬಳಿಯ ಬರೇಲಿ-ನೈನಿತಾಲ್ ಹೆದ್ದಾರಿಯಲ್ಲಿ ತಡ ರಾತ್ರಿ ಭೋಜಿಪುರ ಪೊಲೀಸ್ ಠಾಣೆ ಬಳಿ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಮಗು ಸೇರಿದಂತೆ ಕಾರಿನಲ್ಲಿದ್ದ ಎಂಟು ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.ಕಾರಿನಲ್ಲಿದ್ದವರು ಬರೇಲಿ ನಗರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ಕಾರಿನಿಂದ ಶವಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರು ಮತ್ತು ಟ್ರಕ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಭಯಾನಕ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.ಈ ಕುರಿತಾಗಿ ಮಾತನಾಡಿದ ಪೊಲೀಸ್ ಅಧಿಕಾರಿ, ಕಾರು, ಟ್ರಕ್ ಡಿಕ್ಕಿ ಹೊಡೆದು ಒಂದು ಮಗು ಸೇರಿದಂತೆ ಎಂಟು ಜನರು ತಮ್ಮ ಕಾರಿನಲ್ಲಿ ಸುಟ್ಟು ಕರಕಲಾದರು. ಮದುವೆಯೊಂದರಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದರು. ಕಾರು ಲಾಕ್ ಆಗಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜ್ವಾಲೆಯು ನಿಯಂತ್ರಣಕ್ಕೆ ಬರುವಷ್ಟರಲ್ಲಿ ಹೆಚ್ಚಿನ ಸಂತ್ರಸ್ತರು ಬೆಂಕಿಗೆ ತುತ್ತಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಮೃತಪಟ್ಟವರು ಉತ್ತರಾಖಂಡದ ಬಹೇಡಿ ಗ್ರಾಮದವರು ಎಂದು ತಿಳಿದು ಬಂದಿದೆ.ಬರೇಲಿ ಜಿಲ್ಲೆಯ ಭೋಜಿಪುರ ಬಳಿಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಕಾರು ಟ್ರಕ್‌ಗೆ ಡಿಕ್ಕಿ ಹೊಡೆಯಿತು. ಬಳಿಕ ಟ್ರಕ್ ಕಾರನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿತ್ತು. ಆಗ ಬೆಂಕಿ ಹೊತ್ತಿಕೊಂಡಿತು. ಕಾರಿನೊಳಗೆ ಲಾಕ್ ಆಗಿದ್ದ ಪ್ರಯಾಣಿಕರು ಬೆಂಕಿಯಲ್ಲಿ ಬೆಂದು ಪ್ರಾಣ ಕಳೆದುಕೊಂಡರು?? ಎಂದು ಬರೇಲಿ ಎಸ್‌ಎಸ್‌ಪಿ ಘುಲೆ ಸುಶೀಲ್ ಚಂದ್ರಭಾನ್ ತಿಳಿಸಿದ್ದಾರೆ.ಶವಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಈ ಅಪಘಾತದಿಂದ ಸಂಚಾರ ದಟ್ಟಣೆ ಉಂಟಾಗಿದೆ. ಕ್ರೇನ್ ಮೂಲಕ ಕಾರು ಮತ್ತು ಟ್ರಕ್ ರಸ್ತೆಯಿಂದ ತೆಗೆದುಹಾಕಲಾಯಿತು. ಮೃತದೇಹಗಳನ್ನು ಸುಮಾರು ೧ ಗಂಟೆಯ ನಂತರ ಹೊರತೆಗೆಯಲಾಯಿತು, ಇದು ಸಾಮಾನ್ಯ ಸಂಚಾರವನ್ನು ಪುನರಾರಂಭಿಸಲು ಅನುವು ಮಾಡಿಕೊಡಲಾಯಿತು.
ಸಿಎಂ ಸಂತಾಪ:
ರಸ್ತೆ ಅಪಘಾತದ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಘಾತ ವ್ಯಕ್ತಪಡಿಸಿ, ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.