ಎಂಟು ದಿನ ಮನೆಯಲಿದ್ದರೆ ಕೋರೊನಾ ಬರುವುದಿಲ್ಲ

ದಾವಣಗೆರೆ.ಏ.೨೬; ಕೊರೋನಾ ಎರಡನೇ ಅಲೆ ಉಲ್ಭಣಗೊಂಡಿರುವ ಈ ಹೊತ್ತಿನಲ್ಲಿ ಕೇವಲ ಎಂಟೇ ಎಂಟು ದಿನವಾದರೂ ಸ್ವಯಂಪ್ರೇರಿತರಾಗಿ ಮನೆಯೊಳಗಿದ್ದರೆ ಸಾಕು ಕೊರೋನಾ ಖಂಡಿತ ಸುಟ್ಟು ಬೂದಿಯಾಗಿ ಜಗತ್ತು ಕಂಟಕದಿಂದ ಪಾರಾಗಲಿದೆ ಎಂದು ಚನ್ನಗಿರಿ ತಾಲ್ಲೂಕಿನ ಹರನಹಳ್ಳಿ – ಕೆಂಗಾಪುರದ ಶ್ರೀ ರಾಮಲಿಂಗೇಶ್ವರ ಮಠದ ಪೂಜ್ಯ ಶ್ರೀ ರಾಮಲಿಂಗೇಶ್ವರ ಸ್ವಾಮೀಜಿಯವರು ಅಮೃತವಾಣಿ ನುಡಿದಿದ್ದಾರೆ. 


ಕೊರೋನಾ ಬಗ್ಗೆ ಅಲಕ್ಷೆ ಮಾಡದೆ ಎಂಟು ದಿನಕ್ಕೆ ಬೇಕಾಗುವಷ್ಟು ಅಗತ್ಯ ವಸ್ತುಗಳನ್ನು ಮುಂಜಾಗ್ರತೆಯಾಗಿ ಶೇಖರಿಸಿಕೊಂಡು ಭಕ್ತರು ಮತ್ತು ಸಾರ್ವಜನಿಕರು ತಮ್ಮ ಮನೆಯೊಳಗೆ ಇರುವ ದೃಢ ಸಂಕಲ್ಪ ಮಾಡಬೇಕಿದೆ. ದುಡ್ಡು, ದುಡಿಮೆ, ವ್ಯವಹಾರ ನಷ್ಟ ಸೇರಿದಂತೆ ಯಾವುದರ ಬಗ್ಗೆಯೂ ಈಗ ಚಿಂತಿಸಬೇಡಿ. ಆರೋಗ್ಯವೇ ಭಾಗ್ಯ. ನೀವು ಸ್ವಸ್ಥರಿದ್ದರೆ ಮುಂದೆ ಎಲ್ಲವನ್ನೂ ಮರಳಿ ಗಳಿಸಬಹುದು. ಇದು ಮುಂದೆ ಆಗಬಹುದಾದ ಅಪಾರ ನಷ್ಟಕ್ಕಿಂತ ದೊಡ್ಡದೇನಲ್ಲ. ಊರುಕೇರಿ ಸೇರಿದಂತೆ ಅಕ್ಕಪಕ್ಕದ ಮನೆಗೂ ಸಹ ಹೋಗದೆ ಮೌನವಾಗಿ ಮನೆಯಲ್ಲೇ ಯೋಗ, ಧ್ಯಾನ, ಪೂಜೆ, ಪುನಸ್ಕಾರದಲ್ಲಿ ತೊಡಗಿ ತಮ್ಮ ಕುಟುಂಬದ ಮತ್ತು ಮನುಕುಲದ ಹಿತಕ್ಕಾಗಿ ಪ್ರಾರ್ಥಿಸುವ ಮೂಲಕ ಕರೋನಾ ಕಡಿವಾಣಕ್ಕೆ ಸ್ವಇಚ್ಛೆಯಿಂದ ಒಂದು ರೀತಿಯ ತಪೋನುಷ್ಠಾನ ಕೈಗೊಳ್ಳಬೇಕು ಎಂದು ಶ್ರೀಗಳು ಸಂದೇಶ ನೀಡಿದ್ದಾರೆ.