ಎಂಟು ಕೈಗಾರಿಕೆಗಳ ವಿದ್ಯುತ್ ಕಡಿತ

ಬೀದರ್:ಆ.13: ಪ್ರದೇಶದ ಎಂಟು ಕೆಮಿಕಲ್ ಕೈಗಾರಿಕೆಗಳನ್ನು ಮುಚ್ಚುವ ಪ್ರಕ್ರಿಯೆ ಆರಂಭಗೊಂಡಿದೆ.

ಕೆಮಿಕಲ್ ಕೈಗಾರಿಕೆಗಳಿಂದ ಸುತ್ತಮುತ್ತಲಿನ ಪರಿಸರ, ನೀರು, ಗಾಳಿ ವಿಷವಾಗುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವುಗಳನ್ನು ಬಂದ್ ಮಾಡಬೇಕು ಎಂದು ಇತ್ತೀಚೆಗೆ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ.ಖಂಡ್ರೆ ಅವರು ಆದೇಶ ಹೊರಡಿಸಿದ್ದರು. ಅವರ ಆದೇಶದಂತೆ ಅಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದೆ. ಜೆಸ್ಕಾಂನಿಂದ ಎಲ್ಲಾ ಎಂಟು ಕೈಗಾರಿಕೆಗಳಿಗೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕವನ್ನು ಗುರುವಾರ ಸಂಜೆ ಕಡಿತಗೊಳಿಸಲಾಗಿದೆ.

ಎಂ.ಕೆ. ಇಂಡಸ್ಟ್ರಿ, ಪ್ರಾಥೀನ್‍ಇಂಡಸ್ಟ್ರಿ, ನ್ಯೂ ಹಿಮಾಲಯ ಪ್ಲಾಸ್ಟಿಕ್ ಇಂಡಸ್ಟ್ರಿ, ಪಯೊನೀರ್ ಇಂಡಸ್ಟ್ರಿ, ಒ.ಆರ್. ಇಂಡಸ್ಟ್ರಿ, ಎಂ.ಬಿ. ಇಂಡಸ್ಟ್ರಿ, ಕೆ.ಜಿ.ಎನ್. ಇಂಡಸ್ಟ್ರಿ, ಲಿಮ್ರಾ ಇಂಡಸ್ಟ್ರಿ ಸೇರಿವೆ. ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳು ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಅವರ ಬೇಡಿಕೆಗೆ ಮನ್ನಣೆ ಸಿಕ್ಕಿದೆ.