ಎಂಜಿ ರಸ್ತೆಯಲ್ಲಿ ಬಿಎಂಟಿಸಿ ಬಸ್ ಗೆ ಬೆಂಕಿ ಪ್ರಯಾಣಿಕರು ಪಾರು

ಬೆಂಗಳೂರು,ಜು.೯-ನಗರದ ಜನನಿಬಿಡ ಎಂಜಿ ರಸ್ತೆಯ ನಡುವೆ ಬಿಎಂಟಿಸಿ ಬಸ್ ಒಂದು ಇಂದು ಬೆಳಗ್ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ರೋಸ್ ಗಾರ್ಡನ್‌ನಿಂದ ಶಿವಾಜಿನಗರದ ಕಡೆಗೆ ಹೋಗುತ್ತಿದ್ದ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತುಕೊಂಡ ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕರು ಪ್ರಯಾಣಿಕರನ್ನು ಕೆಳಗೆ ಇಳಿಸಿದರು. ಬಸ್ಸಿನಲ್ಲಿ ಸುಮಾರು ೩೦ ಮಂದಿ ಪ್ರಯಾಣಿಕರಿದ್ದರು. ಚಾಲಕರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಧಾವಿಸಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಈ ಘಟನೆಯಿಂದಾಗಿ, ಎಂಜಿ ರಸ್ತೆಯ ಸದಾ ದಟ್ಟ ವಾಹನನಿಬಿಡ ಸ್ಥಳವಾದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಯಿತು. ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್‌ನಿಂದ ಮೇಲೆದ್ದ ಭಾರಿ ಪ್ರಮಾಣದ ಹೊಗೆ ಪಕ್ಕದಲ್ಲಿದ್ದ ಮೆಟ್ರೋ ನಿಲ್ದಾಣವನ್ನು ಸಹ ಆವರಿಸಿತು.