ಎಂಜಿನಿಯರುಗಳ ವಿರುದ್ದ ಕ್ರಮ ಜರುಗಿಸಲು ಲಿಖಿತ ದೂರು ಸಲ್ಲಿಕ್ಕೆ

ಕೆ.ಆರ್.ಪೇಟೆ. ಜು.28:- ಬಂಡಿ ಸಮೇತ ನನ್ನ ಎತ್ತುಗಳು ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಿದ್ದು ದುರಂತ ಸಾವಿಗೆ ಒಳಗಾಗಲು ನೀರಾವರಿ ಇಲಾಖೆಯ ಎಂಜಿನಿಯರಿಗಳ ಅಸಮರ್ಪಕ ಕಾಮಗಾರಿಯೇ ಕಾರಣವಾಗಿದ್ದು ಅಸಮರ್ಪಕ ಕಾಮಗಾರಿಗೆ ಕಾರಣಕರ್ತರಾದ ಎಂಜಿನಿಯರುಗಳ ವಿರುದ್ದ ಕ್ರಮ ಜರುಗಿಸಬೇಕು ಮತ್ತು ಎತ್ತುಗಳ ಸಾವಿನಿಂದ ನನಗೆ ಉಂಟಾಗಿರುವ ನಷ್ಠ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ ತಾಲೂಕಿನ ಶಿಳನೆರೆ ಗ್ರಾಮದ ರೈತ ರಾಜೇಗೌಡ ಪಟ್ಟಣ ಪೊಲೀಸ್ ಠಾಣೆ, ನೀರಾವರಿ ಇಲಾಖೆ ಮತ್ತು ತಾಲೂಕು ಆಡಳಿತಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ.
ಜುಲೈ 26 ರ ಮಂಗಳವಾರ ತಾಲೂಕಿನ ಶೀಳನೆರೆ ಬಳಿಯಿರುವ ಹೇಮಾವತಿ ಮುಖ್ಯ ನಾಲೆಯಲ್ಲಿ ರಾಸುಗಳಿಗೆ ನೀರು ಕುಡಿಸಲು ಹೋಗಿದ್ದ ಸಂದರ್ಭದಲ್ಲಿ ರಾಜೇಗೌಡರ ಎತ್ತುಗಳು ಬಂಡಿ ಸಮೇತ ನೀರಿಗೆ ಜಾರಿ ಮೃತಪಟ್ಟಿದ್ದವು. ಎತ್ತುಗಳ ಜೊತೆಗೆ ರೈತ ರಾಜೇಗೌಡರಿಗೆ ಸೇರಿದ ಮೇಕೆಯೊಂದು ಮೃತಪಟ್ಟಿತ್ತು. ಸದರಿ ದುರಂತಕ್ಕೆ ನೀರಾವರಿ ಇಲಾಖೆಯ ಅಸಮರ್ಪಕ ಕಾಮಗಾರಿ ಕಾರಣ ಎನ್ನುವುದು ರೈತನ ದೂರು.
ತಾಲೂಕಿನ ಶೀಳನೆರೆ ಬಳಿ ಹೇಮಾವತಿ ಮುಖ್ಯ ನಾಲೆಯ 62 ನೇ ವಿತರಣಾ ನಾಲೆಯಿದೆ. ಇದರಿಂದ ಸ್ವಲ್ಪ ಮುಂದೆ ನಾಲಾ ಸರಪಳಿ 147 ಕಿ.ಮೀ ಬಳಿ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ನಾಲಾ ಆಧುನೀಕರಣದ ಸಂದರ್ಭದಲ್ಲಿ ನೀರಾವರಿ ಇಲಾಖೆ ಜನ ಜಾನುವಾರುಗಳ ಅನುಕೂಲಕ್ಕಾಗಿ ಕ್ಯಾಟಲ್ ರ್ಯಾಂಪ್ ಪುನರ್ ನಿರ್ಮಿಸಿದೆ. ಕ್ಯಾಟಲ್ ರ್ಯಾಂಪ್ ನಿರ್ಮಾಣದ ವೇಳೆ ದನಕರುಗಳು ನಾಲೆಗೆ ಜಾರಿ ಬೀಳದಂತೆ ಕ್ಯಾಟಲ್ ರ್ಯಾಂಪ್ ನ ಎರಡೂ ಬದಿಯಲ್ಲಿ ಸುಮಾರು 45 ಮೀಟರ್ ಉದ್ದ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿರುವುದಾಗಿ ದಾಖಲಿಸಿ ನೀರಾವರಿ ಇಲಾಕೆಯ ಎಂಜಿನಿಯರುಗಳು 17,73,073 ರೂಗಳ ಬಿಲ್ ಮಾಡಿದ್ದಾರೆ. ಆದರೆ ಇಲ್ಲಿ ಯಾವುದೇ ಕಾಂಕ್ರೀಟ್ ತಡೆಗೋಡೆ ನಿರ್ಮಾಣವಾಗಿಲ್ಲ. ತಡಗೋಡೆಯಿಲ್ಲದ ಕಾರಣದಿಂದ ರಭಸವಾಗಿ ಹರಿಯುತ್ತಿದ್ದ ಕಾಲುವೆ ನೀರಿಗೆ ಬೆದರಿದ ನಮ್ಮ ಎತ್ತುಗಳು ಕಾಲು ಜಾರಿ ಬಂಡಿ ಸಮೇತ ನೀರು ಪಾಲಾಗಿದ್ದು ದುರಂತಕ್ಕೆ ನೀರಾವರಿ ಇಲಾಖೆಯ ಎಂಜಿನಿಯರುಗಳೇ ಮುಖ್ಯ ಕಾರಣಕರ್ತರಾಗಿರುತ್ತಾರೆ. ಇದಲ್ಲದೆ ಮುಖ್ಯನಾಲೆಯ ಏರಿಯ ಮೇಲೆ ರಕ್ಷಣಾ ಕಲ್ಲುಗಳನ್ನು ಹಾಕಿರುವುದಾಗಿ 11,19,500 ರೂ ಬಿಲ್ ಬರೆದುಕೊಂಡಿದ್ದಾರೆ.
ಆದರೆ ಸದರಿ ಸ್ಥಳದಲ್ಲಿ ಎಲ್ಲಿಯೂ ರಕ್ಷಣಾ ಕಲ್ಲುಗಳನ್ನು ಹಾಕಿಲ್ಲ. ವಿತರಣಾ ನಾಲೆ 62 ರ ಬಳಿ ಅಳವಡಿಸಿರುವ ಗೇಟುಗಳ ಎರಡೂ ಬದಿಯಲ್ಲೂ ನಾಲಾ ಏರಿ ಸುಮಾರು ಎರಡು ಅಡಿಯಷ್ಟು ಕುಸಿದಿದ್ದು ತೂಬಿನ ಪುನರ್ ನಿರ್ಮಾಣಕ್ಕೆ 13,36,440 ರೂ ವೆಚ್ಚ ಮಾಡಲಾಗಿದೆ. ನೀರಾವರಿ ಇಲಾಖೆಯ ಎಂಜಿನಿಯರುಗಳ ಅವೈಜ್ಞಾನಿಕ ಮತ್ತು ಅಸಮರ್ಪಕ ಕಾಮಗಾರಿಯೇ ಎತ್ತಿನ ಗಾಡಿ ದುರಂತಕ್ಕೆ ಕಾರಣವಾಗಿದೆ. ಎತ್ತಿನ ಬಂಡಿ, ಎರಡು ಎತ್ತುಗಳು ಮತ್ತು ಒಂದು ಮೇಕೆ ದುರಂತದಲ್ಲಿ ಸಾವಿಗೀಡಾಗಿದ್ದು ನನಗೆ 3.80 ಲಕ್ಷ ರೂ ನಷ್ಠವಾಗಿದೆ. ನನಗೆ ಸಿಕ್ಕ ಕಾಮಗಾರಿ ದಾಖಲೆಗಳ ಪ್ರಕಾರ ಸದರಿ ನಾಲೆ ಬೂಕನಕೆರೆಯ ಹೆಚ್.ಎಲ್.ಬಿ.ಸಿ ನಂ23 ರ ವ್ಯಾಪ್ತಿಗೆ ಸೇರಿದ್ದು ಕಾಮಗಾರಿಯನ್ನು ಸಹಾಯಕ ಎಂಜಿನಿಯರುಗಳಾದ ಡಿ. ಮುರುಳಿ ಮತ್ತು ಎಂ.ಎಲ್.ಗುರುಪ್ರಸಾದ್ ಎನ್ನುವವರು ನಿರ್ವಹಣೆ ಮಾಡಿದ್ದಾರೆ. ನಿಯಮಾನುಸಾರ ಕಾಮಗಾರಿ ನಡೆಸದೆ ದುರಂತಕ್ಕೆ ಕಾರಣಕರ್ತರಾದ ಎಂಜಿನಿಯರುಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಮತ್ತೆ ಯಾವುದೇ ದುರಂತ ಸಂಭವಿಸದಂತೆ ನಿಯಮಾನುಸಾರ ಅಗತ್ಯವಾದ ಕಾಂಕ್ರೀಟ್ ತಡೆಗೋಡೆ ಮತ್ತು ರಕ್ಷಣಾ ಕಲ್ಲುಗಳನ್ನು ಅಳವಡಿಸಿ ನನಗೆ ಉಂಟಾಗಿರುವ ನಷ್ಠವನ್ನು ನೀರಾವರಿ ಇಲಾಖೆ ಭರಿಸಿಕೊಡಬೇಕೆಂದು ರೈತ ರಾಜೇಗೌಡ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.