ಎಂಜಿನಿಯರುಗಳೆಂದರೆ ನಾಡು ಕಟ್ಟುವವರು: ಶಾಸಕ ದರ್ಶನಾಪೂರ

ಯಾದಗಿರಿ;ಸೆ.16: ಎಂಜಿನಿಯರುಗಳೆಂದರೆ, ನಾಡು ಕಟ್ಟುವವರು ಎಂದು ಶಹಾಪೂರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅಭಿಪ್ರಾಯಪಟ್ಟರು.
ನಗರದ ಆರ್.ವಿ. ಕನ್ಸಲ್ಟಂಟಿಂಗ್ ಸಿವಿಲ್ ಎಂಜಿನಿಯರಿಂಗ್ ಸಂಸ್ಥೆ ವತಿಯಿಂದ ನಗರದ ಚರ್ಚ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಎಂಜಿನಿಯರ್ಸ್ ದಿನಾಚರಣೆ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ನಾಡು ದೇಶ ಕಟ್ಟಲ್ಪಡುವುದೇ ಎಂಜಿನಿಯರುಗಳಿಂದ ಎಂದು ಅವರು ನುಡಿದರು.
ತಾವು ಸಹ ಕೆಬಿಜೆಎನ್‍ಎಲ್ ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರಾಗಿ ಕೆಲಸ ಮಾಡಿದ್ದನ್ನು ಸ್ಮರಿಸಿಕೊಂಡು ಇಂತಹ ನಾಡು ದೇಶ ಕಟ್ಟುವ ಕೆಲಸದಲ್ಲಿ ಭಾಗಿಯಾಗಿದ್ದುದಾಗಿ ನೆನಪಿಸಿಕೊಂಡರು, ಸರ್ ಎಂ. ವಿಶ್ವೇಶ್ವರಯ್ಯ ಅವರ ಸ್ಮರಣೆಯಲ್ಲಿ ಮಾಡಲಾಗುವ ಇಂತಹ ದಿನಾಚರಣೆ ಮಾದರಿಯಾಗುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ನಗರಸಭೆ ಪೌರಾಯುಕ್ತರೂ ಆದ ಜಿಲ್ಲಾ ನಗರಾಭಿವೃದ್ದಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಬಕ್ಕಪ್ಪ ಹೊಸಮನಿ ಮಾತನಾಡಿ ಸರ್. ಎಂ. ವಿಶ್ವೇಶ್ವರಯ್ಯನವರ ಕಾರ್ಯವೈಖರಿ ನಮ್ಮೆಲ್ಲ ಎಂಜಿನಿಯರುಗಳಿಗೆ ಮಾದರಿಯಾಗಿದೆ. ಯುವ ಎಂಜಿನಿಯರುಗಳು ಸಹ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಏಳ್ಗೆ ಹೊಂದಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆರ್.ವಿ. ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಸಂಸ್ಥೆಯ ರಾಜಕುಮಾರ ಗಣೇರ ಮಾತನಾಡಿ ಕಳೆದ ಮೂರು ವರ್ಷಗಳಿಂದ ಎಂಜಿನಿಯರಗಳ ದಿನಾಚರಣೆ ನಡೆಸಿಕೊಂಡು ಬರುತ್ತಿದ್ದು ಈ ಬಾರಿ ಕೋವಿಡ್ ಕಾರಣ ಸರಳವಾಗಿ ಕಾರ್ಯಕ್ರಮ ಹಮ್ಮಿಕೊಂಡು ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ವೇದಿಕೆ ಮೇಲೆ ಬಿಜೆಪಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಕು. ಲಲಿತಾ ಅನಪೂರ, ಜಿಲ್ಲಾಧ್ಯಕ್ಷ ಡಾ|| ಶರಣಭೂಪಾಲರೆಡ್ಡಿ ಮುದ್ನಾಳ, ಬಾಣತಿಹಾಳ ಚೆನ್ನಕೇಶವ ಗೌಡ, ಕನ್ನಯ್ಯ ಒಡೆಯರ್ ಗುಬ್ಬೆವಾಡ, ಡಿಡಿಯು ಶಿಕ್ಷಣ ಸಂಸ್ತೆ ಅಧ್ಯಕ್ಷ ಡಾ. ಭೀಮಣ್ಣ ಮೇಟಿ, ಸಿದ್ದು ಪಾಟೀಲ್, ಪ್ರಥಮ ದರ್ಜೆ ಗುತ್ತಿಗೆದಾರ ಸೂರ್ಯಕಾಂತ ಅಲ್ಲಿಪುರ, ನಾಗರಾಜ ಬೀರನೂರು ಇನ್ನಿತರರು ಇದ್ದರು.
ಇದೇ ವೇಳೆ ಕೋವಿಡ್ ಜಾಗೃತಿ ಕಿರುಚಿತ್ರ ನಿರ್ಮಿಸಿದ ನಾಗಪ್ಪ ಮಾಲಿ ಪಾಟೀಲ್, ಸುನಿಲ್ ಪಾಟೀಲ್, ಎಬಿವಿಪಿ ಮುಖಂಡ ನಿಟೇಷ್ ಕುರಕುಂದಿ, ಜನತಾ ಟ್ರಸ್ಟ್ ಸಂಚಾಲಕ ಹಣಮಂತ್ರಾಯಗೌಡ ತೇಕರಾಳ, ಪೊಲೀಸ್ ಇಲಾಖೆಯ ಮೋನಪ್ಪ ಗಾಜರಕೋಟ್ ಅವರನ್ನು ಸನ್ಮಾನಿಸಲಾಯಿತು. ಗುರುಪ್ರಕಾಶ ವೈದ್ಯ ನಿರೂಪಿಸಿದರು.