ಎಂಜಿನಿಯರಿಂಗ್ ಹೃದಯ ಇದ್ದಂತೆ

ತುಮಕೂರು, ಸೆ. ೧೭- ಎಂಜಿನಿಯರಿಂಗ್ ಒಂದು ಹೃದಯವಿದ್ದಂತೆ, ಎಂಜಿನಿಯರಿಂಗ್ ಎಂದರೆ ಒಂದು ವಿಜ್ಞಾನವನ್ನು ಬಳಸಿ ಒಂದು ಕ್ರಿಯಾಶೀಲತೆಯಲ್ಲಿ ಪ್ರಾಯೋಗಿಕವಾಗಿ ಪರಿಹಾರ ಕಂಡು ಹಿಡಿಯುವುದು. ಇದು ಒಂದು ಉದಾತ್ತ ವೃತ್ತಿಯಾಗಿದೆ ಎಂದು ಅಕ್ಷಯ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಕೆ.ವಿ. ಶ್ರೀನಿವಾಸ್ ಹೇಳಿದರು.
ನಗರದ ಅಕ್ಷಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಅಕ್ಷಯ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದು.
ಸರ್.ಎಂ. ವಿಶ್ವೇಶ್ವರಯ್ಯ ಅವರು ಶಿಕ್ಷಣ, ಶಿಸ್ತು, ಪರಿಶ್ರಮದ ಸ್ವರೂಪವೇ ಆಗಿದ್ದರು. ಪ್ರಸ್ತುತ ಕಾಲದಲ್ಲಿ ಒಂದು ಯಾಂತ್ರಿಕ ಆಚರಣೆಯ ವಸ್ತುವಾಗುತ್ತಿರುವುದನ್ನು ನಮ್ಮ ದೇಶ ನಡೆದು ಬಂದ ದಾರಿಯಾಗಿದೆ ಎಂದರು.
ಸರ್.ಎಂ. ವಿ. ಹೆಸರೆ ಒಂದು ದಂತ ಕತೆ. ಬದುಕಿದ್ದಾಗಲೇ ದಂತ ಕತೆ ಆದವರಲ್ಲಿ ಅವರೊಬ್ಬರೆ. ಬಾಲ್ಯದ ಬಡತನ ಅವರ ಪ್ರತಿಭಾಶಕ್ತಿಯನ್ನು ಕುಗ್ಗಿಸಲಿಲ್ಲ. ಜೀವನದಲ್ಲಿ ಹಿಗ್ಗಿದವರೂ ಅಲ್ಲ, ಕುಗ್ಗಿದವರೂ ಅಲ್ಲ. ಮಹಾ ಕನಸುಗಾರನೂ ಅಲ್ಲ. ವಾಸ್ತವವಾದಿ, ಕಾಯಕಶಿಲ್ಪಿ. ಸದಾ ಮೂರು ಪೀಸಿನ ಕೋಟು, ಪೇಟ ಶುದ್ದವಾಗಿ ಇಸ್ರಿ ಮಾಡಿದ ಪ್ಯಾಂಟು ಅದಕ್ಕೋಪ್ಪುವ ಟೈಗಳಿಂದ ಅಲಂಕೃತರಾಗುತ್ತಿದ್ದ ಇವರನ್ನು ಇಂಗ್ಲೀಷ್ ಶೈಲಿಯನ್ನು ಅನುಸರಿದವರು ಎನ್ನಲಾಗುವುದು ಇಲ್ಲ. ಅವರೊಬ್ಬ ಅಪ್ಪಟ ಕನ್ನಡಿಗ ದೇಶಭಕ್ತ ಎಂದರು.
ಸೆಪ್ಟೆಂಬರ್ ೧೫ ಇಂಜಿನಿಯರ್‍ಗಳ ದಿನ. ನಮ್ಮ ಹೆಮ್ಮೆಯ ಭಾರತ ರತ್ನ ಸರ್ ಮೋಕ್ಷ ಗುಂಡಂ ವಿಶ್ವೇಶ್ವರಯ್ಯ ಹುಟ್ಟಿದ ದಿನ. ಅದ್ಭುತವಾದ ಮೆದುಳಿಗೆ ಅನ್ವರ್ಥ ನಾಮವೇ ವಿಶ್ವೇಶ್ವರಯ್ಯ ಅವರು. ಇಂಜಿನಿಯರಿಂಗ್ ಕ್ಷೇತ್ರದ ಮೇಧಾವಿ ಸರ್‌ಎಂವಿ ಅವರನ್ನು ಎಕ್ಸ್‌ಪ್ರೆಸ್ ಇಂಜಿನ್ ಎಂದು ಕರೆದದ್ದು ಇದೆ. ತಮ್ಮ ಕರ್ತವ್ಯದ ಸಮಯದಲ್ಲಿ ಒತ್ತು ಮೀರಿ ಬರುವ ಸೋಮಾರಿಗಳನ್ನು ಅವರು ಕ್ಷಮಿಸಲಿಲ್ಲ, ಅದಕ್ಷರನ್ನು ಸಹಿಸಲಿಲ್ಲ, ಆತ್ಮಾಭಿಮಾನ ಬಿಟ್ಟು ಒಂದು ಹೆಜ್ಜೆ ಮುಂದೆ ಇಟ್ಟವರಲ್ಲ.
ಅವರ ಶಿಸ್ತಿನ ಬದುಕು, ಕರ್ತವ್ಯ ಪ್ರಜ್ಞೆ ಎಂದೆಂದಿಗೂ ತೋರುಗಂಬದಂತೆ ತೋರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್, ರಾಧಕೃಷ್ಣ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.