ಎಂಎಸ್‍ಐಎಲ್ ಕಚೇರಿಗೆ ಕಳಂಕಿತ ಅಧಿಕಾರಿ ಕೃಷ್ಣಮೂರ್ತಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ಕಲಬುರಗಿ. ಜ.7:ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಬಿ. ಕೃಷ್ಣಮೂರ್ತಿ ಅವರನ್ನು ಜಿಲ್ಲೆಯ ಎಂಎಸ್‍ಐಎಲ್ ಶಾಖಾ ಕಚೇರಿಗೆ ವರ್ಗಾವಣೆ ಮಾಡಿರುವುದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮನ ಕೂಗು) ರಾಜ್ಯ ಸಮಿತಿ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕಳೆದ ಎರಡು ವರ್ಷಗಳ ಹಿಂದೆ ಬಿ. ಕೃಷ್ಣಮೂರ್ತಿ ಅವರನ್ನು ಎಂಎಸ್‍ಐಎಲ್ ಶಾಖಾ ಕಚೇರಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಸರ್ಕಾರಿ ಸಂಸ್ಥೆಯ ಹಿತದೃಷ್ಟಿಯನ್ನು ಗಮನಿಸದೇ ಸ್ವಹಿತಾಸಕ್ತಿಯಂತೆ ಕಾರ್ಯನಿರ್ವಹಿಸಿದರು. ಖಾಸಗಿ ಮದ್ಯದಂಗಡಿಗಳ ಹತ್ತಿರದಲ್ಲಿ ಎಂಎಸ್‍ಐಎಲ್ ಸಂಸ್ಥೆಯ ಅಂಗಡಿಗೆ ಸ್ಥಳ ನೋಡುವ ನೆಪ ಮಾಡಿ ಲಂಚ ಸ್ವೀಕಾರ, ನೌಕರಿ ನೀಡುವುದಾಗಿ ಹಣ ಪಡೆದು ಶ್ರೀಮಂತರನ್ನು ನೇಮಕ ಮಾಡುವುದು, ಯಾವುದೇ ಶಿಫಾರಸ್ಸುಗಳಿಲ್ಲದಿದ್ದರೂ ಅಸಹಾಯಕರನ್ನು ನಿರ್ಲಕ್ಷಿಸುವುದು, ಎಂಎಸ್‍ಐಎಲ್ ಸಂಸ್ಥೆಯ ಮಳಿಗೆಗಳಿಂದ ಒತ್ತಾಯವಾಗಿ ಹಣ ಪಡೆಯುವುದು ಮುಂತಾದ ದುರಾಡಳಿತದಿಂದಾಗಿ ಪ್ರಕರಣ ದಾಖಲಾಗಿ, 21 ದಿನಗಳವರೆಗೆ ಜೈಲಿಗೆ ಹಾಗೂ ಸುಮಾರು ಏಳು ತಿಂಗಳು ಕಾಲ ಅಮಾನತ್ತಿಗೆ ಒಳಪಡಿಸಲಾಗಿತ್ತು ಎಂದು ವಿವರಿಸಿದರು.
ಬಿ. ಕೃಷ್ಣಮೂರ್ತಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹದಳದಲ್ಲಿ ವಿಚಾರಣೆ ಇತ್ಯರ್ಥವಾಗದೇ ಇದ್ದರೂ ಮತ್ತು ಒಂದು ಸ್ಥಳದಲ್ಲಿ ದಾಳಿಗೆ ಒಳಗಾದ ಅಧಿಕಾರಿಯನ್ನು ಪ್ರಕರಣ ಇತ್ಯರ್ಥವಾಗದೇ ಅದೇ ಸ್ಥಳಕ್ಕೆ ನಿಯುಕ್ತಿಗೊಳಿಸುವಂತಿಲ್ಲ ಎಂಬ ಕಾನೂನು ಇದ್ದರೂ ಅದನ್ನು ಗಾಳಿಗೆ ತೂರಿ ಅಧ್ಯಕ್ಷರ ಶಿಫಾರಸ್ಸಿನೊಂದಿಗೆ ಮತ್ತೆ ವರ್ಗಾವಣೆ ಮಾಡಿಸಿಕೊಂಡು ಬಂದಿರುವುದು ಖಂಡನಾರ್ಹ ಎಂದು ಅವರು ಆಕ್ಷೇಪಿಸಿದರು.
ಹಣದ ದುರಾಸೆಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಖಾ ಮುಖ್ಯಸ್ಥ ಶಂಕ್ರಯ್ಯ ಎಂ.ಎಚ್. ಅವರನ್ನು ವರ್ಗಾವಣೆಗೊಳಿಸಿದ್ದು ಭ್ರಷ್ಟ ವ್ಯಕ್ತಿಗಳ ರೌದ್ರ ನರ್ತನವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಈ ಮಧ್ಯೆ, ಬಿ. ಕೃಷ್ಣಮೂರ್ತಿ ಅವರ ವಿರುದ್ಧ ದೂರು ಸಲ್ಲಿಸಿದ್ದ ವ್ಯಕ್ತಿ ಮತ್ತೆ ಭ್ರಷ್ಟಾಚಾರ ನಿಗ್ರಹದಳದವರಿಗೆ ದೂರು ಸಲ್ಲಿಸಿ, ತನಗೆ ಪ್ರಾಣಭಯವಿದೆ. ಕರ್ತವ್ಯ ನಿರ್ವಹಿಸಲು ಭಯ ಇದೆ. ಬಿ. ಕೃಷ್ಣಮೂರ್ತಿ ಅವರ ಪ್ರಕರಣ ಇನ್ನೂ ಇತ್ಯರ್ಥವಾಗದೇ ಇರುವುದರಿಂದ ನನ್ನ ಎಲ್ಲ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಸ್ಥಳೀಯ ಶಾಖೆಗೆ ಬಿ. ಕೃಷ್ಣಮೂರ್ತಿ ಅವರನ್ನು ವರ್ಗಾವಣೆಗೊಳಿಸದೇ ಇರುವಂತೆ ಕೋರಿದರೂ ಸಹ ವರ್ಗಾವಣೆ ಮಾಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಬಿ. ಕೃಷ್ಣಮೂರ್ತಿ ಅವರ ವರ್ಗಾವಣೆ ಆದೇಶವನ್ನು ರದ್ದುಪಡಿಸಿ, ಈಗಿರುವ ಶಾಖಾ ಮುಖ್ಯಸ್ಥರನ್ನೇ ಮುಂದುವರೆಸಬೇಕು ಎಂದು ಅವರು ಒತ್ತಾಯಿಸಿದರು.
ಸಮಿತಿಯ ರಾಜ್ಯಾಧ್ಯಕ್ಷ ಚಂದ್ರಕಾಂತ್ ಎಲ್. ಕಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರುಕ್ಕಪ್ಪ ಕಾಂಬಳೆ, ವಿಠಲ್ ವಾಲೀಕಾರ್, ಜೈರಾಜ್ ಕಿಣಗಿಕರ್, ರಮೇಶ್ ಹೊಸಮನಿ, ಪ್ರಕಾಶ್ ಹರವಾಳಕರ್ ಮುಂತಾದವರು ಪಾಲ್ಗೊಂಡಿದ್ದರು.