ಎಂಎಲ್ ಸಿ ಚುನಾವಣೆ:ಬಳ್ಳಾರಿ ಕ್ಷೇತ್ರಕ್ಕೆ 247 ಮತಗಟ್ಟೆಗಳ 4663 ಮತದಾರರು: ಮಾಲಪಾಟಿ


ಬಳ್ಳಾರಿ,ನ.15: ರಾಜ್ಯ ವಿಧಾನಪರಿಷತ್ ಅವಿಭಜಿತ ಬಳ್ಳಾರಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಾಳೆ ನ.16ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು. ಡಿ.10 ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ನ.23 ಕೊನೆಯ ದಿನವಾಗಿದೆ. ಚುನಾವಣೆಯನ್ನು ಅತ್ಯಂತ ಸುಸೂತ್ರವಾಗಿ ಜರುಗಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಜಿಲ್ಲಾ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನ.16ರಿಂದ ನ.23ರವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ಸಮಯದಲ್ಲಿ ನಾಮಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಚುನಾವಣೆಯ ಚುನಾವಣಾಧಿಕಾರಿಯಾಗಿರುವ ನನಗೆ ಸಲ್ಲಿಸಬಹುದಾಗಿದೆ ಎಂದರು. ನಾಮಪತ್ರಗಳ ಪರಿಶೀಲನೆ ನ.24ರಂದು,ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ನ.26 ಕೊನೆಯ ದಿನವಾಗಿದೆ ಎಂದರು.
ಈಗಾಗಲೇ ಮಾದರಿ ನೀತಿ ಸಂಹಿತೆ ಅವಳಿ ಜಿಲ್ಲೆಗಳಲ್ಲಿ ಜಾರಿಗೆ ಬಂದಿದೆ. ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ. ಕರಡು ಮತದಾರರ ಪಟ್ಟಿಯನ್ನು ಸಹ ಈಗಾಗಲೇ ಪ್ರಕಟಿಸಲಾಗಿದೆ. ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ ಎಂದರು.

ವಿಧಾನಪರಿಷತ್ ಸದಸ್ಯರಾಗಿರುವ ಕೆ.ಸಿ.ಕೊಂಡಯ್ಯ ಅವರ ಅವಧಿ 2022 ಜ.5ಕ್ಕೆ ಮುಗಿಯಲಿರುವ ಹಿನ್ನೆಲೆಯಲ್ಲಿ ಮುಂದಿನ 6 ವರ್ಷಗಳ ಅವಧಿಯ ಸದಸ್ಯ ಸ್ಥಾನಕ್ಕೆ ಈ ಚುನಾವಣೆ ನಡೆಸಲಾಗುತ್ತಿದೆ.

247 ಮತಗಟ್ಟೆ:
ಡಿ.10ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 4ರವರೆಗೆ ಮತದಾನ ಮಾಡುವುದಕ್ಕಾಗಿ ಅವಳಿ ಜಿಲ್ಲೆಗಳಲ್ಲಿ ಒಟ್ಟು 247 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 235 ಗ್ರಾಪಂಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
2194 ಪುರುಷ ಮತದಾರರು, 2468 ಮಹಿಳಾ ಮತದರಾರರು ಮತ್ತು ಇತರೇ 1 ಸೇರಿದಂತೆ ಒಟ್ಟು 4663 ಮತದಾರರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.‌
ಕುರುಗೋಡು,ಕುರೇಕೊಪ್ಪ,ಹಗರಿಬೊಮ್ಮನಹಳ್ಳಿ,ಹೊಸಪೇಟೆ ನಗರಸಭೆಗಳಲ್ಲಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ, ಮುತ್ಕೂರ್ ಗ್ರಾಪಂಗಳಲ್ಲಿ ಚುನಾಯಿತ ಪ್ರತನಿಧಿಗಳಿರದ ಕಾರಣ ಅಲ್ಲಿ ಮತದಾನ ನಡೆಯುತ್ತಿಲ್ಲ.‌
ಡಿ.14ರಂದು ಬಳ್ಳಾರಿ ನಗರದಲ್ಲಿ ಮತ ಎಣಿಕೆ ನಡೆಯಲಿದೆ.

ಈ ಚುನಾವಣೆಗಳು ಸಾಮಾನ್ಯವಾಗಿ ನಡೆಯುವ ಚುನಾವಣೆಗಳಿಗಿಂತ ವಿಭಿನ್ನವಾಗಿದ್ದು, ಮೊದಲ ಪ್ರಾಶಸ್ತ್ಯ,ಎರಡನೇ ಪ್ರಾಶಸ್ತ್ಯದ ರೂಪದಲ್ಲಿ ಮತದಾನ ನಡೆಯುವುದರ ಮೂಲಕ ಚುನಾವಣೆ ನಡೆಯಲಿದೆ. ಚುನಾವಣಾ ವೆಚ್ಚದ ಮಿತಿ‌ ಇಲ್ಲ ಎಂದು ಅವರು ತಿಳಿಸಿದರು.