ಎಂಎಲ್‍ಸಿ ಹೆಚ್.ವಿಶ್ವನಾಥ್‍ರಿಂದ ಪಶ್ಚಾತ್ತಾಪ ಪ್ರತಿಭಟನೆ

ಮೈಸೂರು: ಏ.04:- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸೋಮವಾರ ತಾವು ಬಿಜೆಪಿ ಬೆಂಬಲಿಸಿ ತಪ್ಪು ಮಾಡಿದೆ. ಇದೊಂದು ಪರಮ ಭ್ರಷ್ಟ ಸರ್ಕಾರ ಎಂದು ಹೇಳಿ ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಅಂಬೇಡ್ಕರ್ ಭಾವಚಿತ್ರ ಇಟ್ಟು ತಮ್ಮ ಬೆಂಬಲಿಗರ ಜತೆ ಪಶ್ಚಾತ್ತಾಪ ಪ್ರತಿಭಟನೆ ನಡೆಸಿದರು.
ಬಳಿಕ ಅವರು ಮಾತನಾಡಿ, ಐವತ್ತು ವರ್ಷಗಳ ರಾಜಕಾರಣದಲ್ಲಿ 40 ವರ್ಷ ಕಾಂಗ್ರೆಸ್‍ನಲ್ಲಿದ್ದೆ. ನಾನು ಎಲ್ಲಿದ್ದರೂ, ಹೇಗಿದ್ದರೂ ನನ್ನ ಮನಸ್ಸಿನಲ್ಲಿ ಕಾಂಗ್ರೆಸ್ ಮಾತ್ರವಿದೆ. ನಾನು ಸದಾಕಾಲ ಜನರೊಟ್ಟಿಗೆ ಬೆರೆತು ಬದುಕಿದವನು ಎಂದರು. ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ದೇವೇಗೌಡರ ಮಾತಿಗೆ ಬೆಲೆಕೊಟ್ಟು ನಾನು ಜಾತ್ಯತೀತ ಜನತಾ ದಳವನ್ನು ಸೇರಬೇಕಾಯಿತು. ದೇವೇಗೌಡರ ಅಭಿಮಾನ, ಪ್ರೀತಿ ಮತ್ತು ಆಶೀರ್ವಾದಗಳಿಂದ ಹಾಗೂ ಹುಣಸೂರಿನ ಜನರ ವಿಶ್ವಾಸದಿಂದಾಗಿ ಶಾಸಕನಾಗಿಯೂ ಆಯ್ಕೆಯಾದೆ. ಆದರೇ, ಜೆಡಿಎಸ್ ಶಾಸಕನಾದ ನನ್ನನ್ನು ಆ ಪಕ್ಷ ನಡೆಸಿಕೊಂಡ ರೀತಿ ಸ್ವಾಭಿಮಾನಿಯಾದ ನನಗೆ ಸಹಿಸಿಕೊಳ್ಳಲಾಗಲಿಲ್ಲ. ನನ್ನ ಮೂಲ ವ್ಯಕ್ತಿತ್ವಕ್ಕೇ ಪೆಟ್ಟು ಬೀಳುತ್ತಿದೆ ಎಂದೆನಿಸಿ ಹೊಂದಾಣಿಕೆ ಇಲ್ಲದ ಮೈತ್ರಿ ಸರ್ಕಾರ ನಡೆಯುತ್ತಿದೆ ಇದರಿಂದ ಯಾರಿಗೂ ಅನುಕೂಲವಿಲ್ಲ ಎಂಬುದು ಖಾತ್ರಿಯಾಗಿ ಅನಿವಾರ್ಯವಾಗಿ ಬಿಜೆಪಿ ಬೆಂಬಲಿಸಬೇಕಾಯಿತು ಎಂದು ಹೇಳಿದರು.
ಇಂಥದ್ದೊಂದು ಪರಮ ಭ್ರಷ್ಟ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣನಾದ ಬಗ್ಗೆ ನನಗೆ ಅತೀವವಾದ ನೋವಿದೆ. ‘ಹೇ ವಿಶ್ವನಾಥ್, ನೀನೇಕೆ ಇಂತಹ ತಪ್ಪು ಮಾಡಿದೆ ಎಂದು ನನ್ನ ಅಂತರಾತ್ಮ ನನ್ನನ್ನು ತಿವಿಯುತ್ತಲೇ ಇದೆ. ಈ ಪಾಪಪ್ರಜ್ಞೆ ನನ್ನನ್ನು ಕೊನೆತನಕವೂ ಕಾಡುತ್ತಲೇ ಇರುವ ಕಾರಣ ಈ ಪಾಪದ ಹೊರೆಯನ್ನು ಇಳಿಸಿಕೊಳ್ಳಲು ಮಹಾತ್ಮಾ ಗಾಂಧೀಜಿ ಪ್ರತಿಮೆ ಮುಂದೆ ಒಂದು ಗಂಟೆಗಳ ಕಾಲ ಸಾಂಕೇತಿಕವಾಗಿ ಪ್ರಾಯಶ್ಚಿತ್ತ ಸತ್ಯಾಗ್ರಹವನ್ನು ಮಾಡಲು ನಿರ್ಧರಿಸಬೇಕಾಯಿತು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಸ್ಲಿಮರ 2ಬಿ ಮೀಸಲಾತಿ ರದ್ದುಗೊಳಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಅಪಚಾರ ಮಾಡಿದ್ದಾರೆ. ಎಲ್ಲರೂ ಭಾರತೀಯರು ಎಂದು ಆಡಳಿತ ನೀಡಬೇಕಿದ್ದ ಸರ್ಕಾರ ಜಾತಿ ಧರ್ಮದ ಆಧಾರದಲ್ಲಿ ವಿಂಗಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಶ್ಚಾತ್ತಾಪ ಸಭೆಯಲ್ಲಿ ರಂಗಕರ್ಮಿ ಬಸವಲಿಂಗಯ್ಯ, ರಾಜ್ಯ ವಕ್ಫ್ ಬೋಡ್9 ಅಧ್ಯಜ್ಷ ಆಸೀಫ್ ಸೇಠ್, ಸಾಹಿತಿ ಪೆÇ್ರ.ಕೆ.ಎಸ್, ಭಗವಾನ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಕೆ.ಎಸ್.ಶಿವರಾಮು, ರಾಜ್ಯ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ವಕೀಲ ಕಾಂತರಾಜು, ರಂಗಕರ್ಮಿ ಕೃಷ್ಣಪ್ರಸಾದ್, ಅಶೋಕ್‍ಪುರಂ ರೇವಣ್ಣ, ಮೈಸೂರು ಕನ್ನಡ ವೇದಿಕೆಯ ಬಾಲಕೃಷ್ಣ, ಕೃಷ್ಣಪ್ಪ, ಶಂಭುಲಿಂಗಸ್ವಾಮಿ, ಕೆ.ಆರ್.ಗೋಪಾಲಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.