ಋಣಾತ್ಮಕ ವಿಚಾರದಿಂದ ಮಹಿಳೆಯ ಪ್ರತಿಭೆ ಹತ್ತಿಕ್ಕದಿರಿ: ಶಕುಂತಲಾ ಬೆಲ್ದಾಳೆ

ಬೀದರ:ನ.12: ಇಂದು ಮಹಿಳೆ ಎಲ್ಲಾ ರಂಗಗಳಲ್ಲೂ ದಾಪುಗಾಲು ಹಾಕುತ್ತಿದ್ದಾಳೆ. ಹೆಚ್ಚು ಹೆಚ್ಚು ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾಳೆ. ಮನೆಯಲ್ಲೂ ಮಹತ್ವದ ನಿರ್ಧಾರ ಕೈಗೊಳ್ಳುವ ಅಧಿಕಾರ ಪಡೆದಿದ್ದಾಳೆ. ಹೀಗಾಗಿ ಮನೆಯ ಹಿರಿಯರು ಯಾವುದೋ ಒಂದು ಋಣಾತ್ಮಕ ವಿಚಾರದಿಂದ ಹೆಣ್ಣುಮಕ್ಕಳ ಪ್ರತಿಭೆಯನ್ನು ಹತ್ತಿಕ್ಕಬಾರದು. ಆಕೆಗೆ ಮನೆಗೆ ಮಾತ್ರ ಸೀಮಿತವಾಗದಂತೆ ನೋಡಿಕೊಂಡು ಸಾಧನೆಯ ಶಿಖರಕ್ಕೆ ತಲುಪಿಸುವ ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕೆಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಶಕುಂತಲಾ ಬೆಲ್ದಾಳೆ ನುಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟಗಳು ಬೀದರ ಅವರ ವತಿಯಿಂದ ಬೀದರ ತಾಲೂಕಿನ ತಾಜಲಾಪುರ ಗ್ರಾಮದ ಬಸವೇಶ್ವರ ಮಂದಿರದಲ್ಲಿ ಹಮ್ಮಿಕೊಂಡ ಶಿವಪಂಚಾಕ್ಷರಿ ಪಠಣ ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಇಂದು ಮಹಿಳೆ ಪೈಲಟ್, ಬಸ್ ಚಾಲಕಿ, ರೈಲ್ವೆ ಚಾಲಕಿ, ಗಡಿಯಲ್ಲಿ ಯೋಧಳಾಗಿ ಸೇವೆ ಸಲ್ಲಿಸಿ ಖ್ಯಾತಿ ಪಡೆಯುತ್ತಿದ್ದಾಳೆ. ಇಂದು ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ರಾಷ್ಟ್ರಪತಿ ಹುದ್ದೇಗೇರಿದ ಉದಾಹರಣೆಗಳಿವೆ. ಸತತ ಪ್ರಯತ್ನದಿಂದ ಹೆಣ್ಣು ಉತ್ತಮ ಸಾಧನೆಯೆಡೆಗೆ ಹೆಜ್ಜೆಯಿಡಬೇಕೆಂದು ಸಲಹೆ ನೀಡಿದರು.

ಮಹಿಳಾ ಪೊಲೀಸ್ ಠಾಣೆಯ ಅಧೀಕ್ಷಕ ನಿರೋಟೆ ಅಶೋಕ ಮಾತನಾಡಿ ಇಂದು ಮಹಿಳೆ ವಂಚನೆಗೆ ಒಳಗಾಗುತ್ತಿರುವುದು ನೋವಿನ ಸಂಗತಿ. ಮೊಬೈಲ್‍ನಿಂದ ವಂಚನೆಗೊಳಗಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ನೂರು ಕಷ್ಟಗಳು ಬಂದರೂ ಅವುಗಳನ್ನು ಎದುರಿಸಿ ಬದುಕುವುದೇ ಸಂಸಾರ ಎಂಬ ಮಾತು ಗಮನದಲ್ಲಿಟ್ಟುಕೊಂಡರೆ ಹೆಣ್ಣು ಜಗತ್ತಿನಲ್ಲಿ ಬೆಳಗಲು ಸಾಧ್ಯ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಬೀದರ ತಾಲೂಕಾ ಯೋಜನಾಧಿಕಾರಿ ರಮೇಶ ನಾಯ್ಕ್ ಮಾತನಾಡಿ “ನಮ್ಮ ಸಂಸ್ಥೆಯು ಮಹಿಳೆಯರ ಸ್ವಾವಲಂಬನೆಗಾಗಿ ಪ್ರಾಮಾಣಿಕ ಸೇವೆ ಮಾಡುತ್ತಿದೆ. ಡಾ. ವೀರೇಂದ್ರ ಹೆಗ್ಗಡೆಯವರು ಈ ಬಾರಿ ಬೀದರ ಜಿಲ್ಲೆಯ ಮಹಿಳಾ ಸ್ವಾವಲಂಬನೆಗಾಗಿ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡುತ್ತಿದ್ದಾರೆ. ಅಲ್ಲದೇ ಸ್ಥಳೀಯ ಇಲಾಖೆಗಳಾದ ಹೈನುಗಾರಿಕೆ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಸಹಕಾರದೊಂದಿಗೆ ಮಹಿಳೆಯರಿಗೆ ತರಬೇತಿ ನೀಡಿ ಬದುಕು ಕಟ್ಟಿಕೊಳ್ಳುವಂತೆ ಮಾಡಲಾಗುತ್ತಿದೆ. ಆದ್ದರಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದು ತನ್ನ ಜೀವನದ ಉಜ್ವಲತೆಯ ಜೊತೆಗೆ ಅಕ್ಕಪಕ್ಕದ ಮಹಿಳೆಯರಿಗೂ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನ್ಯಾಯವಾದಿ ಜಯಶ್ರೀ ಪಾಟೀಲ ಮತ್ತು ಗ್ರಾಮದ ಮುಖಂಡರಾದ ಕಿರಣರೆಡ್ಡಿ ಮಾತನಾಡಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಶಿವಪಂಚಾಕ್ಷರಿ ಮಂತ್ರಪಠಣ, ಬಿಲ್ವಾರ್ಚನೆ ಮತ್ತು ಧಾರ್ಮಿಕಸಭಾ ಕಾರ್ಯಕ್ರಮ ಜರುಗಿತು. ವೇದಿಕೆ ಮೇಲೆ ಸಹಾಯಕ ತೋಟಗಾರಿಕಾ ಅಧಿಕಾರಿ ಮಹೆಬೂಬ್, ಪ್ರಮುಖರಾದ ದತ್ತಾತ್ರಿ ಗದ್ದಿ ಉಪಸ್ಥಿತರಿದ್ದರು. ಬೀದರ ನಗರ ಮೇಲ್ವಿಚಾರಕಿ ಮಂಜುಳಾ ಸ್ವಾಗತಿಸಿದರು. ಶಂಕರ ಪಾಟೀಲ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಒಕ್ಕೂಟದ ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದರು.