ಊ ಅಂಟಾವಾ’ಹಾಡಿನಲ್ಲಿ ನಟಿಸದಂತೆ ಸಮಂತಾಗೆ ಸಲಹೆ

ಮುಂಬೈ, ಮಾ. ೩೧- ತೆಲುಗಿನ ಸೂಪರ್ ಹಿಟ್ ಚಿತ್ರ ಪುಷ್ಪ ಸಿನಿಮಾದ ಊ ಅಂಟಾವಾ ಮರೆಯಲು ಹೇಗೆ ಸಾಧ್ಯ? ನಟಿ ಸಮಂತಾ ರುತ್ ಪ್ರಭು ಕಾಣಿಸಿಕೊಂಡಿದ್ದ ಈ ಐಟಂ ಸಾಂಗ್ ಚಿತ್ರದ ಹಾಡುಗಳಲ್ಲಿ ಹೈಲೈಟ್. ಆದರೆ ಈ ಹಾಡಿನಲ್ಲಿ ಕಾಣಿಸಿಕೊಳ್ಳದಂತೆ ನಟಿ ಸಮಂತಾಗೆ ಅವರ ಕುಟುಂಬಸ್ಥರು ಮತ್ತು ಗೆಳೆಯರು ಸಲಹೆ ನೀಡಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಸಮಂತಾ ಈ ಬಗ್ಗೆ ಮಾತನಾಡಿದ್ದಾರೆ. ಅವರು ೨೦೨೧ ರಲ್ಲಿ ನಾಗ ಚೈತನ್ಯರಿಂದ ಬೇರ್ಪಟ್ಟ ನಂತರ ಈ ಹಾಡು ಹೊರಬಂದಿತ್ತು. ಊ ಅಂಟಾವಾ ಅಂತ ಆಫರ್ ಬಂದಾಗ ನಾನು ವಿರಹದ ನಡುವೆಯೇ ಇದ್ದೆ. ಹಾಡಲ್ಲಿ ನಾನು ಕಾಣಿಸಿಕೊಳ್ಳುವ ಬಗ್ಗೆ ಅನೌನ್ಸ್ ಮೆಂಟ್ ಬಂತು ಅಂತ ನನ್ನ ಪ್ರತಿಯೊಬ್ಬ ಗೆಳೆಯನೂ ಹಿತೈಷಿಗಳು ಮತ್ತು ನನ್ನ ಮನೆಯವರು ನೀನು ಮನೆಯಲ್ಲೇ ಇರು. ಐಟಂ ಸಾಂಗ್ ಮಾಡಬೇಡ. ಇದೀಗ ನೀನು ವಿವಾಹ ಜೀವನದಿಂದ ಹೊರಬಂದಿದ್ದೀಯ, ಇಂತಹ ಸಮಯದಲ್ಲಿ ಐಟಂ ಸಾಗ್ ಮಾಡಬೇಡ ಎಂದಿದ್ದರು ಎಂದು ನಟಿ ಸಮಂತಾ ಹೇಳಿಕೊಂಡಿದ್ದಾರೆ.
ಸೂಪರ್ ಡಿಲಕ್ಸ್ ನಂತಹ ಯೋಜನೆಯ ಭಾಗವಾಗಲು ತನ್ನನ್ನು ಪ್ರೋತ್ಸಾಹಿಸಿದ ನನ್ನ ಸ್ನೇಹಿತರು ಕೂಡ, ವಿಚ್ಛೇದನದ ನಂತರ ಐಟಂ ಸಾಂಗ್ ಮಾಡಬೇಡ ಎಂದಿದ್ದರು. ಆದರೆ ನಾನು ಅದನ್ನು ಏಕೆ ಮರೆಮಾಡಬೇಕು ಎಂದು ಯೋಚಿಸಿದೆ. ಅಂದರೆ ನಾನೇನೂ ತಪ್ಪು ಮಾಡಿಲ್ಲ, ಯಾಕೆ ಬಚ್ಚಿಡಬೇಕು, ನಾನು ತಲೆಮರೆಸಿಕೊಳ್ಳಲು ಹೋಗುತ್ತಿರಲಿಲ್ಲ. ಟ್ರೋಲಿಂಗ್ ಮತ್ತು ನಿಂದನೆಯಿಂದ ದೂರವಾಗಲು ಕಾಯುತ್ತಿದ್ದೆ ಮತ್ತು ನಂತರ ನಿಧಾನವಾಗಿ ಯಾರೋ ಅಪರಾಧ ಮಾಡಿದವರಂತೆ ತೆವಳುತ್ತಿದ್ದೆ. ನಾನು ನನ್ನ ವೈವಾಹಿಕ ಜೀವನವನ್ನ ಸಮರ್ಥವಾಗಿ ನಿಭಾಯಿಸಿದ್ದರೂ ಅಲ್ಲಿ ಸೋಲಾಯಿತು ಎಂದು ಸಮಂತಾ ಹೇಳಿದ್ದಾರೆ.