ಊರಿನತ್ತ ಹೊರಟ ವಲಸೆ ಕಾರ್ಮಿಕರು ಬಸ್ ರೈಲು ನಿಲ್ದಾಣಗಳಲ್ಲಿ ಜನ ಜಂಗುಳಿ

ನವದೆಹಲಿ,ಏ.೨೦- ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕಳೆದ ರಾತ್ರಿಯಿಂದಲೇ ಒಂದು ವಾರಗಳ ಕಾಲ ಲಾಕ್‌ಡೌನ್ ಜಾರಿಯಾಗಿದೆ. ಇದರಿಂದಾಗಿ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ.
ಕಳೆದ ಬಾರಿ ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಎದುರಿಸಿದ ಪರಿಸ್ಥಿತಿ ಇನ್ನು ಮಾಸಿಲ್ಲ. ಬಹುತೇಕ ಜನರು ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದರು. ಈ ಬಾರಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಭೀತಿಯಲ್ಲಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಹೀಗಾಗಿ, ಬಸ್, ರೈಲುಗಳಲ್ಲಿ ಭಾರಿ ಜನ ಸಂದಣಿ ಕಂಡು ಬಂದಿದೆ.
ಲಾಕ್‌ಡೌನ್ ಜಾರಿ ಘೋಷಣೆಯಾದ ಬೆನ್ನಲ್ಲೇ ವಲಸೆ ಕಾರ್ಮಿಕರು ತಂಡೋಪತಂಡವಾಗಿ ಬಸ್ ನಿಲ್ದಾಣಗಳತ್ತ ದೌಡಾಯಿಸಿದ್ದರಿಂದ ಭಾರಿ ಜನ ಸಂದಣಿ ಕಂಡು ಬಂದಿತು. ರೈಲ್ವೆ ನಿಲ್ದಾಣಗಳಲ್ಲು ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು.
ರೈಲುಗಳಲ್ಲಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದವರಿಗೆ ಅವಕಾಶ ಕಲ್ಪಿಸಲಾಯಿತು, ಆದರೆ, ಮುಂಗಡ ಟಿಕೆಟ್ ಕಾಯ್ದಿರಿಸದಿದ್ದವರು ಒಮ್ಮೆಲೆ ಮುಗಿ ಬಿದ್ದಿದ್ದರಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿತು. ರೈಲ್ವೆ ಬ್ರಿಡ್ಜ್‌ಗಳು, ಫ್ಲಾಟ್‌ಫಾರಂಗೆ ತಲುಪುವ ಮೆಟ್ಟಿಲುಗಳ ಮೇಲೆಯೂ ಜನಸಂದಣಿ ಕಂಡು ಬಂದು ಸಾರ್ವಜನಿಕರು ಪರದಾಡುವಂತಾಯಿತು.
ಕೋವಿಡ್ ನಿಯಂತ್ರಣಕ್ಕೆ ಅನುಸರಿಸಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳು ನೀರಿನಲ್ಲಿ ಹೋಮ ಮಾಡಿದಂತಾಯಿತು. ದೆಹಲಿಯಲ್ಲಿ ಒಂದುವಾರ ಲಾಕ್‌ಡೌನ್ ಜಾರಿಯಿಂದಾಗಿ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈಗ ಒಂದುವಾರ ಮಾತ್ರ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ದಿನ ವಿಸ್ತರಣೆಯಾಗುವ ಸಾಧ್ಯತೆ ಇರುವುದರಿಂದ ಜನರು ವಲಸೆ ಕಾರ್ಮಿಕರು ಗುಳೆ ಹೊರಟ್ಟಿದ್ದಾರೆ.