ಊರಿಗೆ ಹೊರಟ ಜನರಿಗೆ ೧೨ ಸಾವಿರ ಬಸ್‌ಗಳ ವ್ಯವಸ್ಥೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಏ. ೨೭- ಕೊರೊನಾ ತಡೆಗೆ ಸರ್ಕಾರ ಇಂದು ರಾತ್ರಿಯಿಂದಲೇ ಜಾರಿಗೆ ಬರುವಂತೆ ೧೪ ದಿನಗಳ ಲಾಕ್‌ಡೌನ್ ಘೋಷಿಸಿರುವ ಬೆನ್ನಲ್ಲೆ ಬೆಂಗಳೂರಿನಿಂದ ಸ್ವಂತ ಊರುಗಳಿಗೆ ತೆರಳುತ್ತಿರುವವರಿಗೆ ಮಾಡಿರುವ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಪರಿಶೀಲಿಸಿದರು
ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಇಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರ ಜತೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ಬಸ್‌ಗಳ ವ್ಯವಸ್ಥೆ ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲಿಸಿದರು
ಪ್ರಯಾಣಿಕರಿಗೂ ಧೈರ್ಯ ಹೇಳಿ, ಆತಂಕ ಬೇಡ. ಊರುಗಳಿಗೆ ತಲುಪಲು ಬಸ್ ವ್ಯವಸ್ಥೆ ಮಾಡಲಾಗಿದೆ. ಗೊಂದಲಕ್ಕೆ ಅವಕಾಶವಾಗದಂತೆ ಊರುಗಳನ್ನು ತಲುಪಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
೧೨ ಸಾವಿರ ಬಸ್‌ಗಳ ವ್ಯವಸ್ಥೆ
ಲಾಕ್‌ಡೌನ್ ಕಾರಣ ಸ್ವಂ ಊರುಗಳಿಗೆ ತೆರಳುತ್ತಿರುವ ಜನ ಮೂರು ಸಾರಿಗೆ ನಿಗಮಗಳ ಮೂಲಕ ೧೨ ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಊರುಗಳಿಗೆ ಬಸ್‌ಗಳನ್ನು ಓಡಿಸಲಾಗುತ್ತಿದೆ ಎಂದರು.
ಜನ ಇಂದು ರಾತ್ರಿ ಒಳಗೆ ತಮ್ಮ ಊರು ತಲುಪಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಯಾರೂ ಆತಂಕಕ್ಕೆ ಒಳಗಾಗದೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಬಸ್‌ಗಳಲ್ಲಿ ಸಂಚರಿಸುವಂತೆ ಅವರು ಮನವಿ ಮಾಡಿದರು.
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿರುವ ಪ್ರತಿಯೊಬ್ಬರಿಗೂ ಅವರ ಊರುಗಳಿಗೆ ತಲುಪಲು ಬಸ್ ವ್ಯವಸ್ಥೆ ಮಾಡುತ್ತೇವೆ. ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದರು.
ಜನವೋ ಜನ
ಲಾಕ್‌ಡೌನ್ ಕಾರಣ ಬೆಂಗಳೂರಿನಲ್ಲಿರುವ ಹೊರ ಊರಿನವರು ತಮ್ಮ ಊರುಗಳತ್ತ ಮುಖ ಮಾಡಿರುವುದರಿಂದ ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣವಾದ ಮೆಜೆಸ್ಟಿಕ್‌ನಲ್ಲಿಂದು ಎಲ್ಲಿ ನೋಡಿದರೂ ಜನವೋ ಜನ. ಬಸ್‌ಗಳನ್ನು ಹಿಡಿದು ಊರು ಸೇರುವ ಧಾವಂತದಲ್ಲಿದ್ದಾರೆ ನೂರಾರು ಮಂದಿ.
ಹೆಚ್ಚಿನ ಸಂಖ್ಯೆಯಲ್ಲಿ ಜನ ಊರುಗಳತ್ತ ಮುಖ ಮಾಡಿರುವುದರಿಂದ ದೂರದ ಊರುಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸಲಾಗುತ್ತಿತ್ತು. ಬೆಂಗಳೂರಿನ ಹತ್ತಿರದಲ್ಲಿರುವ ಊರುಗಳಿಗೆ ಬಿಎಂಟಿಸಿ ಬಸ್‌ಗಳನ್ನು ಜನರನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ.
ಇಂದು ಮೆಜೆಸ್ಟಿಕ್ ಸುತ್ತಮುತ್ತ ನೂರಾರು ಸಂಖ್ಯೆಯಲ್ಲಿ ಬಸ್‌ಗಳು ರಸ್ತೆಗಿಳಿದಿರುವುದರಿಂದ ಟ್ರಾಫಿಕ್ ಜಾಮ್ ಸಹ ಉಂಟಾಗಿದ್ದು, ಪೊಲೀಸರು ಈ ಸಂಚಾರ ದಟ್ಟಣೆಯನ್ನು ಸರಿಪಡಿಸುವಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ಅಲ್ಲದೆ ಹೊರವಲಯಗಳಲ್ಲೂ ಬಹುತೇಕ ಮಂದಿ ರಸ್ತೆಗಳಲ್ಲಿ ಬಸ್‌ಗಾಗಿ ಕಾದು ಕುಳಿತು, ಬಸ್ ಬಂದ ತಕ್ಷಣ ಬಸ್ ಹಿಡಿದು ತಮ್ಮ ಊರುಗಳಿಗೆ ತಲುಪುತ್ತಿದ್ದಾರೆ.