“ಊರಿಗೆ ಕಂಠಕವಾಗುತ್ತಿರುವ ಅನುಪಯುಕ್ತ ಕೆರೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ23. ಗ್ರಾಮದ ಹೃದಯಭಾಗದಲ್ಲಿ ಕಂಡುಬರುವ ಸಿರಿಗೇರಿ ಕೆರೆಯು ಅನುಪಯುಕ್ತವಾಗಿ ಮಾರ್ಪಾಡಾಗಿ ಇಲ್ಲಿನ ಸುತ್ತಮುತ್ತಲಿನ ನಿವಾಸಿಗಳಿಗೆ ಕಂಠಕವಾಗುತ್ತಿದೆ. ಸುಮಾರು 2ಎಕರೆ ಪ್ರದೇಶದ ಕೆರೆಯು ಈಗ ಒತ್ತುವರಿಯಾಗಿ ಕನಿಷ್ಠ ಅರ್ಧ ಎಕರೆಯೂ ಸಿಗದ ರೀತಿಯಲ್ಲಿದೆ. ಇರುವ ಕೆರೆಯಲ್ಲಿ ಪೂರ್ತಿಯಾಗಿ ಆಪು, ಜಬ್ಬಲು, ಗರಿಕೆ, ಪಾಚಿಗಿಡಗಳು ದಟ್ಟವಾಗಿ ಬೆಳೆದು ಮನುಷ್ಯರಿಗೆ ಮಕ್ಕಳಿಗೆ ಅಪಾಯ ತರುವ ಕ್ರಿಮಿಕೀಟಗಳ ತಾಣವಾಗಿದೆ. ಕೆರೆಗಡ್ಡೆಯ ಮೇಲೆ ವಾಸಿಸುತ್ತಿರುವ ನೂರಾರು ಕುಟುಂಬಗಳಿಗೆ ಈ ಕೆರೆಯು ಕಂಠಕಪ್ರಾಯವಾಗಿ ಪರಿಣಮಿಸಿದೆ. ರಾತ್ರಿಯ ವೇಳೆ ಈ ಪ್ರದೇಶದಲ್ಲಿ ತಿರುಗಾಡಲು ಮೈಯಲ್ಲಾ ಕಣ್ಣಾಗಿ ಇರಬೇಕು. ಹಾವು ಚೇಳುಗಳು, ಇತರೆ ಜಂತುಗಳು ಕಾಣಿಸಿಕೊಂಡು ಭಯ ಹುಟ್ಟಿಸುತ್ತಿವೆ. ಕೋಟಿಗಟ್ಟಲೇ ದಿನಂಪ್ರತಿ ಉತ್ಪತ್ತಿಯಾಗುವ ಸೊಳ್ಳೆ ಕೀಟಗಳಿಂದ ಗ್ರಾಮಸ್ಥರಿಗೆ ನಾನಾ ರೀತಿಯ ರೋಗಗಳು ಕಾಡುವ ಭೀತಿಇದೆ.
ಗಟ್ಟಿ ನಿಲುವು ತಳೆಯದ ಗ್ರಾಮಾಡಳಿತ: ಯಾವುದೇ ರೀತಿಯಿಂದ ಯೋಚನೆ ಮಾಡಿದರೂ ಈ ಕೆರೆಯು ಅನುಪಯುಕ್ತ ಪ್ರದೇಶವಾಗಿದೆ ಎಂಬುದು ಎಲ್ಲರಿಗೂ ಮೇಲ್ನೋಟಕ್ಕೆ ತಿಳಿದ ವಿಷಯವಾಗಿದೆ. ಹಿಂದಿನ ಕಾಲದ ಕೆರೆ ಎಂದು ಇದನ್ನು ಅಭಿವೃದ್ದಿಪಡಿಸಿದರೆ ಕಾಲಕ್ರಮೇಣ ಜನರ ಕಾಳಜಿ ಇಲ್ಲದೇ ಕೆರೆಪ್ರದೇಶದ ಸುತ್ತಲೂ ರಾತ್ರಿಹೊತ್ತು ಪುರುಷರು, ಮಹಿಳೆಯರು, ಮಕ್ಕಳೂ ಧಾರಾಳವಾಗಿ ಬಹಿರ್ದೆಶೆ ಮಾಡುತ್ತಾರೆ. ಸುತ್ತಲಿನ ಪ್ರದೇಶದವರು, ಹೋಟೆಲ್, ಅಂಗಡಿಯವರು ಇಲ್ಲಿ ಕಸದ ತ್ಯಾಜ್ಯ ಹಾಕುವುದು ರೂಢಿ ಇರುವುದರಿಂದ ಅಭಿವೃದ್ಧಿಯಾದ ಕೆರೆ ಯಾವತ್ತೂ ಶುಚಿಯಾಗಿರಲು ಸಾಧ್ಯವಿಲ್ಲವೆನ್ನುವಂತಾಗಿದೆ. ಕೆರೆಯನ್ನು ಮುಚ್ಚಿ ನೆಲ ಸಮತಟ್ಟುಗೊಳಿಸಿ ಗ್ರಾಮಕ್ಕೆ ಅವಶ್ಯವಿರುವ ಪಂಚಾಯಿತಿ ಕಟ್ಟಡ, ವಾಣಿಜ್ಯ ಮಳಿಗೆಗಳ ನಿರ್ಮಾಣದಂತಹ ನಿರ್ಧಾರ ಕೈಗೊಂಡರೆ ಗ್ರಾಮದ ಅಭಿವೃದ್ಧಿಯಾಗಲಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ಪೋಟೊ. ಸಿರಿಗೇರಿಯಲ್ಲಿ ಅನುಪಯುಕ್ತವಾಗಿರುವ ಕೆರೆಯಲ್ಲಿ ವಿವಿಧ ತಳಿಯ ಗಿಡಗಂಟಿ ನಾಟಿಕೊಂಡು ಕ್ರಿಮಿಕೀಟ ವಾಸಿಸುವ ತಾಣವಾಗಿದೆ.