
ಚಿತ್ರದುರ್ಗ ಮಾ. 2; ಮುಖ್ಯಮಂತ್ರಿಗಳು ಮಾ. 04 ರಂದು ಚಿತ್ರದುರ್ಗಕ್ಕೆ ಆಗಮಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಸೂಕ್ತ ಊಟದ ವ್ಯವಸ್ಥೆ, ಕುಡಿಯುವ ನೀರು ಹಾಗೂ ಫಲಾನುಭವಿಗಳನ್ನು ಸುರಕ್ಷತೆಯಿಂದ ಕರೆತಂದು ವಾಪಸ್ ಕರೆದುಕೊಂಡು ಹೋಗುವವರೆಗಿನ ಎಲ್ಲ ವ್ಯವಸ್ಥೆಯೂ ಸಮರ್ಪಕವಾಗಿರುವಂತೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿ. ರಾಮ್‍ಪ್ರಸಾತ್ ಮನೋಹರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಫಲಾನುಭವಿಗಳ ಸಮಾವೇಶ ಆಯೋಜನೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಲಕ್ಷಾಂತರ ಜನರು ವಿವಿಧ ಸವಲತ್ತುಗಳನ್ನು ಪಡೆದು ಫಲಾನುಭವಿಗಳಾಗಿದ್ದಾರೆ. ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಪರಿಶಿಷ್ಟರು, ಹಿಂದುಳಿದ ವರ್ಗದವರು ಹೀಗೆ ಎಲ್ಲ ವರ್ಗಗಳ ಜನರು ಸರ್ಕಾರದ ವಿವಿಧ ಯೋಜನೆಗಳಡಿ ಒಂದಲ್ಲ ಒಂದು ಸೌಲಭ್ಯ ಪಡೆದುಕೊಂಡಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶ ಆಯೋಜನೆಗೆ ಸರ್ಕಾರ ಸೂಚನೆ ನೀಡಿದ್ದು, ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮವೇ ಮೊದಲ ಸಮಾವೇಶವಾಗಿದೆ. ಮುಖ್ಯಮಂತ್ರಿಗಳೇ ಖುದ್ದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ, ಸಮಾವೇಶ ಯಶಸ್ವಿಗೊಳಿಸಲು ಅಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಂಡು, ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಕೃಷಿ, ಆರೋಗ್ಯ, ಶಿಕ್ಷಣ, ಸಹಕಾರ, ಆಹಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ತೋಟಗಾರಿಕೆ, ಸ್ಲಂ ಬೋರ್ಡ್ ಸೇರಿದಂತೆ ವಿವಿಧ ಇಲಾಖೆಗಳಿಂದ ಕನಿಷ್ಟ 75 ಸಾವಿರದಿಂದ 01 ಲಕ್ಷದವರೆಗೆ ಫಲಾನುಭವಿಗಳನ್ನು ಸಮಾವೇಶಕ್ಕೆ ಸೇರಿಸಲು ಆಯಾ ಇಲಾಖಾ ಅಧಿಕಾರಿಗಳು ಕ್ರಮ ವಹಿಸಬೇಕು. ಆಯಾ ಇಲಾಖೆ ಅಧಿಕಾರಿಗಳು ಸಮಾವೇಶಕ್ಕೆ ಕರೆತರಲು ವಾಹನದ ವ್ಯವಸ್ಥೆ, ಮಾರ್ಗ, ಪ್ರತಿ 25 ರಿಂದ 30 ಫಲಾನುಭವಿಗಳಿಗೆ ಒಬ್ಬರಂತೆ ಮೇಲ್ವಿಚಾರಕರನ್ನು ನಿಯೋಜಿಸಿ, ಫಲಾನುಭವಿಗಳನ್ನು ಸಮಾವೇಶದ ಸ್ಥಳಕ್ಕೆ ಕರೆತಂದು, ವಾಪಸ್ ಸುರಕ್ಷಿತವಾಗಿ ಹಿಂದಿರುಗುವವರೆಗಿನ ಯೋಜನೆಯನ್ನು ರೂಪಿಸಿಕೊಳ್ಳಬೇಕು. ಫಲಾನುಭವಿಗಳ ವಿವರ, ವಾಹನದ ವಿವರ, ಮಾರ್ಗ, ಮೇಲ್ವಿಚಾರಕರ ನಿಯೋಜನೆ ಕುರಿತ ಸಮಗ್ರ ವಿವರವನ್ನು ಒಂದು ದಿನದ ಒಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಮುಖವಾಗಿ ಊಟ, ಕುಡಿಯುವ ನೀರು ಹಾಗೂ ವಾಹನದ ವ್ಯವಸ್ಥೆ ಯೋಜಿತ ರೀತಿಯಲ್ಲಿ ಆಗಬೇಕು, ಇದರಲ್ಲಿ ಯಾವುದೇ ಗೊಂದಲ ಇರಬಾರದು. ಫಲಾನುಭವಿಗಳಿಗೆ ಇಲಾಖಾವಾರು ಪ್ರತ್ಯೇಕವಾಗಿ ಬ್ಯಾಡ್ಜಸ್ ರೂಪಿಸಿ ವಿತರಿಸಬೇಕು ಎಂದರು.