ಊಟದ ನಂತರ ತಾಂಬೂಲ ಸೇವನೆ ಇರಲಿ

ತಾಂಬೂಲ ಅನೇಕ ಔಷಧಿ ಗುಣಗಳಿಂದ ಕೂಡಿದ್ದು, ಆಯುರ್ವೇದ ವೈದ್ಯರು ಇದನ್ನು ಅಮೃತ ಸಮಾನವಾದ ವನಸ್ಪತಿ ಎಂದು ಗುರುತಿಸಿದ್ದಾರೆ.ಸಂಸ್ಕೃತದಲ್ಲಿ ನಾಗವಲ್ಲಿ ಎಂದು ಕರೆಯಲ್ಪಡುವ ಇದು ರುಚಿಯಲ್ಲಿ ಕಟು (ಖಾರ), ತಿಕ್ತ (ಕಹಿ), ಮಧುರ (ಸಿಹಿ) ರಸಗಳಿಂದ ಕೂಡಿದ್ದ ಉಷ್ಣ, ತೀಕ್ಷ್ಣ ಹಾಗೂ ಕ್ಷಾರ ಗುಣವುಳ್ಳದ್ದಾಗಿದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ನಾಗವಲ್ಲಿ ವೃಷ್ಯ ಎಂದರೆ ಕಾಮೋತ್ತೇಜಕವಾಗಿದ್ದು, ಬಸ್ತಿರೋಧಕ, ಮೂತ್ರಪಿಂಡ ಹಾಗೂ ಹೃದಯ ರೋಗಗಳಲ್ಲಿ ಹೆಚ್ಚು ಉಪಯುಕ್ತವಾಗುತ್ತದೆ. ಮಧುಮೇಹ ರೋಗವುಳ್ಳವರಿಗೆ ತಾಂಬೂಲ ಸೇವನೆ ಒಂದು ಪಥ್ಯ ಅಭ್ಯಾಸ. ದಿನದಲ್ಲಿ ಎರಡು ಅಥವಾ ಮೂರು ಸಲ, ಊಟವಾದ ನಂತರ ತಾಂಬೂಲ ಸೇವಿಸುವುದು ಹಿತಕರ ಹಾಗೂ ಆರೋಗ್ಯದಾಯಕ.

ಪ್ರತಿದಿನ ತಾಂಬೂಲ ಸೇವನೆ ಮಾಡುವುದರಿಂದ ಶರೀರದ ಉಷ್ಣತೆ ಸಮತೋಲನದಲ್ಲಿದ್ದು, ಮುಖ ಮತ್ತು ಚರ್ಮದ ಕಾಂತಿ ಹೆಚ್ಚಾಗುತ್ತದೆ. ಮನಸ್ಸು ಪ್ರಸನ್ನಗೊಳ್ಳುತ್ತದೆ, ಬುದ್ಧಿ ಚುರುಕಾಗುತ್ತದೆ. ತಾಂಬೂಲವು ಬಾಯಿಗೆ ನಿರ್ಮಲತೆ ಮತ್ತು ಪರಿಮಳ ಕೊಟ್ಟು ಮುಖದಲ್ಲಿ ಕಾಂತಿ ಮತ್ತು ಪ್ರಸನ್ನತೆಯನ್ನುಂಟುಮಾಡುತ್ತದೆ. ದವಡೆ ಹಲ್ಲು, ವಸಡುಗಳಿಗೆ ಬಲ, ನಾಲಿಗೆಗೆ ರುಚಿ ಕೊಡುತ್ತದೆ. ಸ್ವರವನ್ನು ಸ್ವಚ್ಛಗೊಳಿಸಿ, ಮಲಬದ್ಧತೆ ನಿವಾರಿಸುತ್ತದೆ. ಬಾಯಿ ಮತ್ತು ಗಂಟಲುಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ನೆಗಡಿ, ಗಂಟಲು ನೋವು ಮುಂತಾದ ರೋಗಗಳು ಉಂಟಾಗದಂತೆ ತಡೆಯುತ್ತದೆ.

ಜೀರ್ಣಾಂಗಗಳನ್ನು ಉದ್ದೀಪನಗೊಳಿಸಿ ಅಗ್ನಿಮಾಂದ್ಯ, ಅಜೀರ್ಣ ರೋಗಗಳನ್ನು ನಿವಾರಿಸುತ್ತದೆ. ಗರದಿಕ್ಷ ಗುಲ್ಮ ಮುಂತಾದ ರೋಗಗಳಿಗೆ ಒಳ್ಳೆಯದು. ತಾಂಬೂಲದ ಮೂರನೆ ಮುಖ್ಯ ಘಟಕವೇ ಸುಣ್ಣ. ಸುಧಾ, ಕ್ಷಾರ ಎಂದು ಕರೆಯಲ್ಪಡುವ ಇದು ತೀಕ್ಷ್ಣ ಉಷ್ಣ, ಕ್ಷಾರ ಗುಣಗಳಿಂದ ಕೂಡಿದ್ದು, ವಾತ ಕಫಾ ದೋಷಗಳನ್ನು
ನಾಶಮಾಡುತ್ತದೆ.

ದೇಹದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಗುಣವುಳ್ಳ ಸುಣ್ಣ ಒಳ್ಳೆಯ ಜೀರ್ಣಕಾರಕ ಹಾಗೂ ಕ್ರಿಮಿನಾಶಕವಾಗಿದೆ. ಮೂಳೆ ಮತ್ತು ದಂತಗಳ
ಬೆಳವಣಿಗೆ ಮತ್ತು ಪೋಷಣೆಗೆ ಸಹಾಯ ಮಾಡುತ್ತವೆ. ತಾಂಬೂಲದ ಜತೆ ಉಪಯೋಗಿಸುವ ಲವಂಗ, ಏಲಕ್ಕಿ, ಜಾಕಾಯಿ, ಜಾಪತ್ರೆ, ಪಚ್ಚ ಕರ್ಪೂರ ಮುಂತಾದ ಸುಗಂಧ
ದ್ರವ್ಯಗಳು ತಾಂಬೂಲಕ್ಕೆ ಪರಿಮಳ ಮತ್ತು ರುಚಿಯನ್ನು ಕೊಡುವುದೇ ಅಲ್ಲದೆ ಅನೇಕ ಉತ್ತಮ ಔಷದ ಗುಣಗಳನ್ನು ಹೊಂದಿದ್ದು, ಆರೋಗ್ಯ ಸುಧಾರಣೆಗೆ ಪೂರಕವಾಗುತ್ತವೆ.