ಉ.ಪ್ರ : 5 ನಗರಗಳಲ್ಲಿ ಲಾಕ್ ಡೌನ್: ಹೈಕೋರ್ಟ್ ಸೂಚನೆ

ಲಕ್ನೋ, ಏ.19- ಉತ್ತರಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐದು ನಗರಗಳಲ್ಲಿ ಕಡ್ಡಾಯವಾಗಿ ಲಾಕ್ ಡೌನ್ ಜಾರಿ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಉತ್ತರಪ್ರದೇಶ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇಂದು ರಾತ್ರಿಯಿಂದ ಏಪ್ರಿಲ್ 26 ವರೆಗೆ ಲಕ್ನೋ ,ಪ್ರಯಾಗ್ ರಾಜ್,ವಾರಣಾಸಿ, ಕಾನ್ಪುರ, ಗೋರಖ್ ಪುರ ನಗರಗಳಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಜಾರಿ ಮಾಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.

5 ನಗರಗಳಲ್ಲಿ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಮತ್ತು ಕಚೇರಿಗಳನ್ನು ಕಡ್ಡಾಯವಾಗಿ ಮುಚ್ಚುವ ಮೂಲಕ ಕೊರೊನಾ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಿದ್ದಾರ್ಥ ವರ್ಮಾ ಮತ್ತು ಅಜಿತ್ ಕುಮಾರ್ ಅವರಿದ್ದ ನ್ಯಾಯಪೀಠ ಆದೇಶ ನೀಡಿದೆ.

ರಾಜ್ಯ ಹೈಕೋರ್ಟ್ ನಿಂದ 5 ನಗರಗಳಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಮಾಡುವಂತೆ ಆದೇಶ ಹೊರಬೀಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇಂದು ರಾತ್ರಿಯಿಂದಲೇ ಲಾಕ್ ಡೌನ್ ಮಾಡಲು ಮುಂದಾಗಿದೆ.

ವಾರ್ತಾ ಮತ್ತು ಸಂಪರ್ಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಹೈಕೋರ್ಟ್ ನ ಆದೇಶದ ಅನ್ವಯ 5 ನಗರಗಳಲ್ಲಿ ಇಂದು ರಾತ್ರಿಯಿಂದಲೇ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ

ಹಣಕಾಸು ಸಂಸ್ಥೆಗಳು, ವೈದ್ಯಕೀಯ,ಆರೋಗ್ಯ ಸೇವೆ, ಕೈಗಾರಿಕೆ,ವೈಜ್ಞಾನಿಕ ಸಂಸ್ಥೆಗಳು, ನಗರ ಪಾಲಿಕೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ‌

ಮಾಲ್, ಹೋಟೆಲ್, ಸಿನಿಮಾ ಮಂದಿರ,ರೆಸ್ಟೋರೆಂಟ್ ಸಂಪೂರ್ಣ ವಾಗಿ ಬಂದ್ ಮಾಡಲು ನಿರ್ಧರಿಸಲಾಗಿದೆ‌