ಉ. ಕೊರಿಯಾ ಜತೆ ಸಮರಾಭ್ಯಾಸ ದ. ಕೊರಿಯಾ ಕಿಡಿ

ನ್ಯೂಯಾರ್ಕ್, ನ.೭- ದಕ್ಷಿಣ ಕೊರಿಯಾ ಹಾಗೂ ಅಮೆರಿಕಾ ನಡುವಿನ ಸಮರಾಭ್ಯಾಸದ ವಿರುದ್ಧ ಇಂದು ಉತ್ತರ ಕೊರಿಯಾ ಸೇನಾಡಳಿತ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಇದರ ವಿರುದ್ಧ ನಿರ್ದಾಕ್ಷಿಣ್ಯ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಅಮೆರಿಕಾ ಹಾಗೂ ದಕ್ಷಿಣ ಕೊರಿಯಾವು ಸಮರಾಭ್ಯಾಸದ ಮೂಲಕ ಮುಕ್ತ ಪ್ರಚೋದನೆ ರೀತಿಯಲ್ಲಿ ವರ್ತಿಸುತ್ತಿದೆ. ಇವೆರಡು ರಾಷ್ಟ್ರಗಳು ಅಸ್ಥಿರ ಮುಖಾಮುಖಿ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಇದಕ್ಕೆ ನಾವು ಸೂಕ್ತ ರೀತಿಯಲ್ಲಿ ಸುಸ್ಥಿರ, ದೃಢನಿಶ್ಚಯ ಮತ್ತು ಅಗಾಧ ಪ್ರಾಯೋಗಿಕ ಮಿಲಿಟರಿ ಕ್ರಮಗಳೊಂದಿಗೆ ಕಸರತ್ತುಗಳನ್ನು ನಡೆಸಲಿದ್ದೇವೆ. ಈ ಸಮರಾಭ್ಯಾಸವು ಸದ್ಯದ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಲಿದೆ. ನಾವು ಈಗಾಗಲೇ ದಕ್ಷಿಣ ಕೊರಿಯಾದ ಹಲವು ನಗರಗಳು ಹಾಗೂ ಯುದ್ದ ವಿಮಾನಗಳ ನೆಲೆಗಳ ಮೇಲೆ ದಾಳಿ ನಡೆಸುವ ಅಭ್ಯಾಸ ನಡೆಸಿದ್ದೇವೆ ಎಂದು ಉತ್ತರ ಕೊರಿಯಾ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್‌ಎ) ವರದಿ ಮಾಡಿದೆ. ಕಳೆದ ಹಲವು ದಿನಗಳಿಂದ ಉತ್ತರ ಕೊರಿಯಾ ಹಲವು ರೀತಿಗಳ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕಾ ಹಾಗೂ ದಕ್ಷಿಣ ಕೊರಿಯಾ ಜಂಟಿ ಸೇನಾ ತಾಲೀಮು ನಡೆಸಿದೆ. ಇದೇ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ತನ್ನ ಕ್ಷಿಪಣಿ ಪರೀಕ್ಷೆಗಳನ್ನು ಮತ್ತೆ ಮುಂದುವರೆಸುತ್ತಿದೆ.