ಉ.ಕೊರಿಯಾದಿಂದ ರಷ್ಯಾಕ್ಕೆ ಶಸ್ತ್ರಾಸ್ತ್ರ ಪೂರೈಕೆ ಅಮೆರಿಕ ಕಳವಳ

ನ್ಯೂಯಾರ್ಕ್, ಜೂ.೧೩- ಉಕ್ರೇನ್ ವಿರುದ್ಧದ ಯುದ್ದದಲ್ಲಿ ರಷ್ಯಾಗೆ ಉತ್ತರ ಕೊರಿಯಾ ಬೆಂಬಲ ಘೋಷಿಸಿರುವುದು ಸಹಜವಾಗಿಯೇ ಅಮೆರಿಕಾದ ನೆಮ್ಮದಿ ಕೆಡಿಸಿದೆ. ಇದೇ ಅವಧಿಯಲ್ಲಿ ರಷ್ಯಾಗೆ ಉತ್ತರ ಕೊರಿಯಾ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ತೊಡಗಿಕೊಳ್ಳಲಿದೆ ಎಂಬ ಆತಂಕವವನ್ನು ಅಮೆರಿಕಾ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ವಿದೇಶಾಂಗ ಇಲಾಖೆ ವಕ್ತಾರರು, ಉಕ್ರೇನ್ ವಿರುದ್ಧದ ಯುದ್ದದಲ್ಲಿ ರಷ್ಯಾಗೆ ಶಸ್ತ್ರಾಸ್ತ್ರಗಳನ್ನು ನೀಡಿರುವುದನ್ನು ಉತ್ತರ ಕೊರಿಯಾ ನಿರಾಕರಿಸಿದೆ. ಆದರೆ ಕಳೆದ ನವೆಂಬರ್‌ನಲ್ಲಿ ರಷ್ಯಾ ಬೆಂಬಲಿತ ವ್ಯಾಗ್ನರ್ ಗ್ರೂಪ್‌ಗೆ ಪದಾತಿಸೈನ್ಯದ ರಾಕೆಟ್‌ಗಳು ಹಾಗೂ ಕ್ಷಿಪಣಿಗಳು ಸೇರಿದಂತೆ ಶಸ್ತ್ರಾಸ್ತ್ರ ಪೂರೈಕೆಗಳನ್ನು ಉತ್ತರ ಕೊರಿಯಾ ಮಾಡಿರುವುದು ನಮಗೆ ಖಚಿತವಾಗಿ ತಿಳಿದಿದೆ. ಮುಂದಿನ ದಿನಗಳಲ್ಲಿ ರಷ್ಯಾಗೆ ಉತ್ತರ ಕೊರಿಯಾ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲಿರುವ ಬಗ್ಗೆ ನಮಗೆ ಆತಂಕವಿದೆ ಎಂದು ತಿಳಿಸಿದ್ದಾರೆ. ಇನ್ನು ತಮ್ಮ ದೇಶ ರಷ್ಯಾದೊಂದಿಗೆ ನಿಲ್ಲಲಿದೆ ಮತ್ತು ಅದಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಸೋಮವಾರ ಸಂದೇಶ ರವಾನಿಸಿರುವುದಾಗಿ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿರುವುದು ಸಹಜವಾಗಿಯೇ ಅಮೆರಿಕಾದ ನಿದ್ದೆಗೆಡಿಸಿದೆ. ರಷ್ಯಾದ ರಾಷ್ಟ್ರೀಯ ದಿನದಂದು ಪುಟಿನ್‌ಗೆ ಕರೆಮಾಡಿ ಶುಭಾಷಯ ಕೋರಿದ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ‘ ಶತ್ರುಪಡೆಗಳ ಹೆಚ್ಚುತ್ತಿರುವ ಬೆದರಿಕೆಯನ್ನು ತೊಲಗಿಸಲು ಪುಟಿನ್ ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸಾಮ್ರಾಜ್ಯಶಾಹಿಗಳ ದಬ್ಬಾಳಿಕೆ ಮತ್ತು ನಿರಂಕುಶ ವರ್ತನೆಯ ವಿರುದ್ಧ ತಮ್ಮ ದೇಶದ ಸಾರ್ವಭೌಮ ಹಕ್ಕುಗಳು, ಅಭಿವೃದ್ಧಿ ಮತ್ತು ಹಿತಾಸಕ್ತಿಯ ರಕ್ಷಣೆಯ ಪವಿತ್ರಯುದ್ಧದಲ್ಲಿ ತೊಡಗಿರುವ ರಶ್ಯ ಜನತೆಯನ್ನು ಉತ್ತರ ಕೊರಿಯಾ ಬೆಂಬಲಿಸಲಿದೆ. ರಷ್ಯಾವನ್ನು ನಾಶಗೊಳಿಸಲು ಉಕ್ರೇನ್ ನೆಪದಲ್ಲಿ ಅಮೆರಿಕ ನಡೆಸುತ್ತಿರುವ ಛಾಯಾ ಯುದ್ಧ ಮತ್ತು ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳು ಸೇನಾ ನೆರವು ಘೋಷಿಸಿರುವುದು ಖಂಡನಾರ್ಹವಾಗಿದೆ ಎಂದು ಕಿಮ್ ಜಾಂಗ್ ಉನ್ ಹೇಳಿರುವುದಾಗಿ ವರದಿಯಾಗಿದೆ.