ಉ. ಕೊರಿಯಾದಿಂದ ಯೋಧ ಅಮೆರಿಕಕ್ಕೆ ವಾಪಸ್

ನ್ಯೂಯಾರ್ಕ್, ಸೆ.೨೮- ಕಳೆದ ಜುಲೈನಲ್ಲಿ ಉತ್ತರ ಕೊರಿಯಾ ಗಡಿ ದಾಟಿ, ಅಲ್ಲಿನ ಪೊಲೀಸ್ ವಶದಲ್ಲಿದ್ದ ಅಮೆರಿಕಾ ಯೋಧನ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ. ಗಡಿ ದಾಟಿ ಉತ್ತರ ಕೊರಿಯಾದಲ್ಲಿದ್ದ ಯೋಧನನ್ನು ಇದೀಗ ಅಮೆರಿಕಾ ತನ್ನ ವಶಕ್ಕೆ ಪಡೆದುಕೊಂಡಿದೆ.
ಅಮೆರಿಕಾದ ಸೇನೆಯಲ್ಲಿ ವಿಚಕ್ಷಣ ತಜ್ಞನಾಗಿದ್ದ ಟ್ರಾವಿಸ್ ಕಿಂಗ್ (೨೩) ಕಳೆದ ಜುಲೈನಲ್ಲಿ ದಕ್ಷಿಣ ಕೊರಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಉತ್ತರ ಕೊರಿಯಾ ಗಡಿ ದಾಟಿ, ಬಳಿಕ ಅಲ್ಲಿ ಬಂಧನಕ್ಕೊಳಗಾಗಿದ್ದ. ಯೋಧನನ್ನು ಮರಳಿ ನಮ್ಮ ವಶಕ್ಕೆ ನೀಡಬೇಕೆಂದು ಅಮೆರಿಕಾ ಹಲವು ಬಾರಿ ವಿಶ್ವಸಂಸ್ಥೆಯ ಮೂಲಕ ಉತ್ತರ ಕೊರಿಯಾಗೆ ಮನವಿ ಮಾಡಿತ್ತು. ಇದೀಗ ಯೋಧನನ್ನು ಚೀನಾಗೆ ಕರೆತಂದು ಅಲ್ಲಿ ಅಮೆರಿಕಾ ಸುಪರ್ದಿಗೆ ಒಪ್ಪಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ಹಿರಿಯ ಅಧಿಕಾರಿಯೊಬ್ಬರು, ತಿಂಗಳುಗಳ ರಾಜತಾಂತ್ರಿಕ ಮಾತುಕತೆಯ ಬಳಿಕ ಇದು ಆತನ ಬಿಡುಗಡೆ ಸಾಧ್ಯವಾಗಿದೆ. ಕಿಂಗ್ ತನ್ನ ಮನೆಗೆ ಹೋಗುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ನಾವು ಖಚಿತಪಡಿಸಬಹುದು. ಆತ ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾಗಲು ತುಂಬಾ ಎದುರು ನೋಡುತ್ತಿದ್ದಾರೆ. ಕಿಂಗ್ ಬಿಡುಗಡೆಗೆ ಉತ್ತರ ಕೊರಿಯಾಗೆ ಅಮೆರಿಕಾ ಯಾವುದೇ ರೀತಿಯ ರಿಯಾಯಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಅಮೆರಿಕಾ ಹಾಗೂ ಉತ್ತರ ಕೊರಿಯಾ ನಡುವೆ ಯಾವುದೇ ರಾಜತಾಂತ್ರಿಕ ಸಂಬಂಧ ಇರದ ಹಿನ್ನೆಲೆಯಲ್ಲಿ ಅಮೆರಿಕಾವು ನೇರವಾಗಿ ವಿಶ್ವಸಂಸ್ಥೆ ಮೂಲಕ ಪರಿಹಾರ ಕಾರ್ಯಕ್ಕೆ ಮುಂದಾಗಿತ್ತು. ಅಲ್ಲದೆ ಈ ವಿಚಾರದಲ್ಲಿ ಚೀನಾದ ನೆರವನ್ನು ಪಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊನೆಗೂ ಯೋಧ ಕಿಂಗ್ ಪ್ರಕರಣ ಸುಖಾಂತ್ಯಗೊಂಡಿದೆ ಎನ್ನಬಹುದು.