ಬೆಳಗಾವಿ,ಜು.೮-ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಆದರೆ ಉತ್ತರ ಹಾಗೂ ಮಧ್ಯ ಕರ್ನಾಟಕದಲ್ಲಿ ಮಳೆಯೇ ಇಲ್ಲದೇ ಬರದ ಪರಿಸ್ಥಿತಿ ಉಂಟಾಗಿದೆ. ಒಂದು ಕಡೆ ಅತಿವೃಷ್ಠಿ ಮತ್ತೊಂದು ಕಡೆ ಬರದ ಛಾಯೆ ರಾಜ್ಯಕ್ಕೆ ಆವರಿಸಿದೆ.
ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಭೆ ನಡೆಸಲಾಗಿದೆ.ಸಭೆಯಲ್ಲಿ ಜಲಾಶಯಗಳ ನೀರನ್ನು ಕುಡಿಯಲು ಮಾತ್ರ ಬಳಸುವಂತೆ ಆಲಮಟ್ಟಿ, ಘಟಪ್ರಭಾ, ಮಲಪ್ರಭಾ ಜಲಾಶಯ ಅಧಿಕಾರಿಗಳಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ್ ಸೂಚನೆ ನೀಡಿದ್ದಾರೆ.ಇನ್ನು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿಯೂ ಮಳೆಯ ಅಭಾವ ಉಂಟಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ವಾಡಿಕೆ ಮಳೆ ೧೭೫ ಮಿ. ಮೀ ಆಗಬೇಕಿತ್ತು. ಆದರೆ, ೭೧ ಮಿ.ಮೀ ಆಗಿದೆ. ಹೀಗಾಗಿ ಶೇಕಡಾ -೬೦ರಷ್ಟು ಕೊರತೆ ಉಂಟಾಗಿದೆ.
ಇನ್ನು ಬಾಗಲಕೋಟೆಯಲ್ಲಿ ವಾಡಿಕೆ ೯೪ ಮಿ. ಮೀ ಮಳೆಯಾಗಬೇಕಿತ್ತು. ಆದರೆ ೩೧ ಮಿ.ಮೀ ಮಳೆ ಆಗಿದ್ದು, ಶೇಕಡಾ ೬೭ರಷ್ಟು ಮಳೆಯ ಕೊರತೆ ಉಂಟಾಗಿದೆ. ವಿಜಯಪುರದಲ್ಲಿ ವಾಡಿಕೆ ೯೮ ಮಿ. ಮೀಮಳೆಯಾಗಬೇಕಿತ್ತು. ಆದರೆ ೪೭ ಮಿ.ಮೀ ಮಳೆಯಾಗಿದ್ದು, ಶೇಕಡಾ ೫೨ ರಷ್ಟು ಮಳೆಯ ಕೊರತೆಯಾಗಿದೆ.
ಗದಗದಲ್ಲಿ ವಾಡಿಕೆ ೯೫ ಮಿ.ಮೀ ಮಳೆಯಾಗಬೇಕಿತ್ತು. ಆದರೆ ೬೫ ಮಿ.ಮೀ ಮಳೆಯಾಗಿದ್ದು, ಶೇಕಡಾ ೩೨ ರಷ್ಟು ಮಳೆಯ ಕೊರತೆ ಉಂಟಾಗಿದೆ.ಹಾವೇರಿಯಲ್ಲಿ ವಾಡಿಕೆ ೧೪೬ ಮಿ. ಮೀ ಮಳೆಯಾಗಬೇಕಿತ್ತು. ಆದರೆ ೭೫ ಮಿ.ಮೀ.ಮಳೆಯಾಗಿದೆ. ಶೇಕಡಾ ೪೯ ರಷ್ಟು ಮಳೆಯ ಕೊರತೆಯಾಗಿದೆ.
ಧಾರವಾಡದಲ್ಲಿ ವಾಡಿಕೆ ೧೪೭ ಮಿ. ಮೀ ಮಳೆಯಾಗಬೇಕಿತ್ತು. ಆದರೆ ೭೧ ಮಿ.ಮೀ ಮಳೆಯಾಗಿದೆ. ಶೇಕಡಾ ೫೧ ರಷ್ಟು ಮಳೆಯ ಕೊರತೆ ಉಂಟಾಗಿದೆ.ಉತ್ತರ ಕನ್ನಡದ ವಾಡಿಕೆ ಮಳೆ ೮೫೯ ಮಿ.ಮೀ ಆಗಿದ್ದು, ಸದ್ಯ ೫೦೬ ಮಿ.ಮೀ ಮಳೆ ಆಗಿದೆ. ಈವರೆಗೆ ಶೇಕಡಾ ೪೧ ರಷ್ಟು ಮಳೆಯ ಕೊರತೆ ಉಂಟಾಗಿದೆ.