ಉ.ಕರ್ನಾಟಕದಲ್ಲಿ ಮಳೆ ಬೀದರ್ ಶಾಲೆಗಳಿಗೆ ರಜೆ

ಬೆಂಗಳೂರು, ಜು ೨೩- ರಾಜ್ಯದ ಹಲವೆಡೆ ಇಂದು ಕೂಡ ಮೋಡ ಕವಿದ ವಾತಾವರಣದ ಜೊತೆಗೆ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ರಾಜ್ಯದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಾಗಲಕೋಟೆ, ವಿಜಯಪುರ, ಕೊಪ್ಪಳ, ಗದಗ ಭಾಗಗಳಲ್ಲಿ ಮಳೆ ಮುಂದುವರಿದಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಗೆ ಜನರು ತ್ತತರಿಸಿ ಹೋಗಿದ್ದಾರೆ. ಈ ಮಧ್ಯೆ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಿಲಿಕಾನ್‌ಸಿಟಿಯಲ್ಲಿ ಗುಡುಗು ಸಹಿತ ಮಳೆ
ಸಿಲಿಕಾನ್‌ಸಿಟಿಯಲ್ಲಿ ಮುಂದಿನ ೨ ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದೆರಡು ದಿನಗಳಿಂದ ಕೊಂಚ ರಿಲೀಪ್‌ಕೊಟ್ಟಿದ್ದ ವರಣ ಮತ್ತೆ ಆರ್ಭಟಿಸುವ ಸೂಚನೆ ನೀಡಲಾಗಿದೆ.. ಬೆಂಗಳೂರಿನಲ್ಲಿ ಮುಂದಿನ ೨ ದಿನಗಳ ಕಾಲ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಬೀದರ್‌ನಲ್ಲಿ ಶಾಲೆಗಳಿಗೆ ರಜೆ
ಉತ್ತರ ಒಳನಾಡಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಬೀದರ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಬೀದರ್ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಅಂಗನವಾಡಿ ಮತ್ತು ೧ ರಿಂದ ೫ ನೇ ತರಗತಿವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಆದೇಶ ಹೊರಡಿಸಿದ್ದಾರೆ.ಬೀದರ್ ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಬೀದರ್ನ ಓಂನಗರ ಬಡಾವಣೆಯ ರಸ್ತೆಯಲ್ಲಿ ನೀರು ನಿಂತಿದೆ. ಬಡಾವಣೆಯ ಜನರು ಮನೆಯಿಂದ ಹೊರಬಾರದ ಸ್ಥಿತಿ ಎದುರಾಗಿದೆ. ಬಡಾವಣೆಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅಬ್ಬರಿಸಿದ ಮಳೆಗೆ ನದಿಗಳು ಉಕ್ಕಿ ಹರಿದು ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಹೊನ್ನಾವರ, ಯಲ್ಲಾಪುರ, ಕಾರವಾರ, ಕುಮಟಾ ತಾಲೂಕುಗಳಲ್ಲಿ ಹೆಚ್ಚು ಹಾನಿ ಉಂಟಾಗಿದೆ.

ಜಲಾಶಯಗಳು ಭರ್ತಿ
ಕರಾವಳಿ ಜಿಲ್ಲೆಗಳಲ್ಲಿಯೂ ಮೋಡ ಕವಿದ ವಾತವರಣ ಕಂಡು ಬರಲಿದೆ. ಕೊಡಗು, ಶಿವಮೊಗ್ಗ, ಹಾಸನ, ಉಡುಪಿ ಮತ್ತು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದೆ. . ಮಹಾರಾಷ್ಟ್ರ ಭಾಗದಲ್ಲಿ ಮಳೆ ಹೆಚ್ಚಾಗುತ್ತಿರುವ ಕಾರಣ ಕೃಷ್ಣೆ ಮತ್ತು ಭೀಮೆಯಅಬ್ಬರ ಹೆಚ್ಚಾಗುತ್ತಿದೆ. ಒಳ ಹರಿವು ಹೆಚ್ಚಾದ ಹಿನ್ನೆಲೆ ಜಲಾಶಯಗಳಿಂದ ಹೆಚ್ಚು ನೀರು ಬಿಡಲಾಗುತ್ತದೆ.
ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬರುತ್ತಿದೆ. ಇದರ ಪರಿಣಾಮದಿಂದಾಗಿ ಮತ್ತೆ ನೀರಿನ ಹರಿವು ಏರಿದ್ದು ರಾಜ್ಯದ ವಿವಿಧ ಜಲಾಶಯಗಳು ಮತ್ತೆ ತುಂಬಲು ಪ್ರಾರಂಭಿಸಿದ್ದು ಈಗಾಗಲೇ ಕೆಲವು ಜಲಾಶಯಗಳು ಭರ್ತಿಯಾಗಿವೆ.

ವಾಯುವ್ಯ ಮತ್ತು ಈಶಾನ್ಯ ಭಾಗದಲ್ಲಿ ಭಾರಿ ಮಳೆ
ಕಳೆದ ೨೪ ಗಂಟೆಗಳಲ್ಲಿ ಭಾರತದ ವಾಯುವ್ಯ ಮತ್ತು ಈಶಾನ್ಯ ಭಾಗಗಳ ಹಲವಾರು ರಾಜ್ಯಗಳಲ್ಲಿ ಭಾರಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪಶ್ಚಿಮ ಹಿಮಾಲಯ ಪ್ರದೇಶ, ರಾಜಸ್ಥಾನ, ಮಧ್ಯ ಭಾರತ ಮತ್ತು ಒಡಿಶಾದಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಜುಲೈ ೨೩ ಮತ್ತು ೨೫ ರ ನಡುವೆ ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್, ಹರಿಯಾಣ, ದೆಹಲಿ ಮತ್ತು ಚಂಡೀಗಢದಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ತನ್ನ ಹವಾಮಾನ ಮುನ್ಸೂಚನೆ ನೀಡಿದೆ