ಉಸ್ತುವಾರಿ ಸಚಿವ ಜಿಲ್ಲೆಯ ವಿಳಂಬ – ಬಿಜೆಪಿ ಮುಖಂಡರಿಂದಲೇ ಟೀಕೆ

ಬೆರಳೆಣಿಕೆಯ ಶಾಸಕರು, ಅಧಿಕಾರಿಗಳ ಜೊತೆ ಕೊರೊನಾ ಮಹಾಮಾರಿಯ ಪ್ರಗತಿ ಪರಿಶೀಲನೆ
ರಾಯಚೂರು.ಏ.೩೦- ಕೊರೊನಾ ಮಹಾಮಾರಿಯ ಸಂಕಷ್ಟದ ಸಂದರ್ಭದಲ್ಲಿಯೂ ಜಿಲ್ಲೆಗೆ ಭೇಟಿ ನೀಡಿ, ಸಮಾಲೋಚನೆ ನಡೆಸಬೇಕಾಗಿದ್ದ ಉಸ್ತುವಾರಿ ಸಚಿವ ನಿನ್ನೆವರೆಗೂ ಜಿಲ್ಲೆಗೆ ಬಾರದಿರುವ ಅಸಮಾಧಾನ ಕೇವಲ ವಿರೋಧ ಪಕ್ಷಗಳು ಮಾತ್ರವಲ್ಲ ಬಿಜೆಪಿಯ ಮುಖಂಡರಲ್ಲೂ ತೀವ್ರವಾಗಿರುವುದು ಈಗ ಫೇಸ್ ಬುಕ್ ಪೋಸ್ಟ್ ಮೂಲಕ ಸ್ಪಷ್ಟಗೊಂಡಿದೆ.
ಇಂದು ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡುತ್ತಿರುವ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡರೊಬ್ಬರು ತಮ್ಮ ಫೇಸ್ ಬುಕ್‌ನಲ್ಲಿ ಕೊನೆಗೂ ಬಂದರು ಬೆಳಗಾವಿಂದ ರಾಯಚೂರಿಗೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅವರದ್ದೇ ಪಕ್ಷದ ಮತ್ತೊಬ್ಬ ಮುಖಂಡರು ಯಾರು ಬಂದರು ಅಣ್ಣಾಜೀ ಎಂದು ಕೇಳಿದ ಪ್ರಶ್ನೆಗೆ ಬಿಜೆಪಿ ಮುಖಂಡ ಸನ್ಮಾನ್ಯ ಶ್ರೀ ಉಪ ಮುಖ್ಯಮಂತ್ರಿಗಳು ಎಂದು ಹೇಳಿಕೊಂಡಿದ್ದಾರೆ. ಈ ರೀತಿ ಸ್ವಪಕ್ಷದ ಮುಖಂಡರು ಸೇರಿದಂತೆ ವಿರೋಧ ಪಕ್ಷ ಹಾಗೂ ಜನ ಸಾಮಾನ್ಯರ ಅಸಮಾಧಾನದ ಮಧ್ಯೆ ಜಿಲ್ಲೆಗೆ ಭೇಟಿ ನೀಡಿದ ಸಚಿವರು ಅಧಿಕಾರಿಗಳೊಂದಿಗೆ ಸಾಮಾಜಿಕ ಅಂತರದಲ್ಲಿ ನೇರಾನೇರ ಸಂವಾದ ನಡೆಸದೇ, ಅತ್ಯಂತ ಸುರಕ್ಷಿತವಾಗಿ ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಸಂವಾದ ನಡೆಸಿರುವುದು ಜನರಲ್ಲಿ ಮತ್ತೊಂದು ನಿರಾಸೆಗೆ ಕಾರಣವಾಯಿತು.
ವಿರೋಧಿ ಪಕ್ಷಗಳ ಭೇಟಿಗೂ ಉಸ್ತುವಾರಿ ಸಚಿವರು ಆರಂಭದಲ್ಲಿ ನಿರಾಕರಿಸಿದ್ದರು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಭೇಟಿಗೆ ಅವಕಾಶ ನೀಡದಿದ್ದರೇ, ಪ್ರತಿಭಟನೆ ಮತ್ತು ಧರಣಿಗಿಳಿಯಬೇಕಾಗುತ್ತದೆಂದು ಎಚ್ಚರಿಸಿದ ನಂತರ ಕೊನೆಗೂ ಅವಕಾಶ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಾ ಅಧಿಕಾರಿಗಳೊಂದಿಗೆ ನೇರ ಪ್ರಗತಿ ಪರಿಶೀಲನೆ ಮಾಡಿದ ಉಸ್ತುವಾರಿ ಸಚಿವರಿಗೆ ಜಿಲ್ಲೆಯಲ್ಲಿ ಮಾತ್ರ ಈ ರೀತಿಯ ಚರ್ಚೆ ನಡೆಸದಿರುವುದು ಜಿಲ್ಲೆಯ ಬಗ್ಗೆ ಮತ್ತು ಇಲ್ಲಿಯ ಜನರ ಬಗ್ಗೆ ಅವರಿಗಿರುವ ಮಲತಾಯಿ ಧೋರಣೆಗೆ ಸಾಕ್ಷಿಯೆಂದು ಆರೋಪ ಕೇಳಿ ಬಂದವು.
ರಿಮ್ಸ್ ಮತ್ತು ಓಪೆಕ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಯಾವ ರೀತಿಯ ಸ್ಥಿತಿಗತಿ ಇದೆಂಬ ಮಾಹಿತಿ ಅಧಿಕಾರಿಗಳಿಂದ ಪಡೆದ ಅವರು, ಅಲ್ಲಿಯ ಭೇಟಿಗೆ ಸಂಬಂಧಿಸಿ ಯಾವುದೇ ಕಾರ್ಯಕ್ರಮ ನಿಗದಿಗೊಳಿಸಿರಲಿಲ್ಲ. ಸಂಜೆವರೆಗೂ ಆಸ್ಪತ್ರೆ ಸ್ಥಿತಿಗತಿ ಬಗ್ಗೆ ಪರಿಶೀಲಿಸುವರೇ ಎನ್ನುವುದು ಕುತೂಹಲದಾಯಕವಾಗಿದೆ. ಕೇವಲ ವಿಡಿಯೋ ಕಾನ್ಫ್‌ರೆನ್ಸ್ ಮತ್ತು ಕೆಲ ಶಾಸಕರು, ಅಧಿಕಾರಿಗಳೊಂದಿಗೆ ಚರ್ಚಿಸಿದರೇ, ಇಲ್ಲಿಯ ವಾಸ್ತವತೆ ತಿಳಿಯಸು ಸಾಧ್ಯವೇ ಎನ್ನುವ ಟೀಕೆಗಳಿಗೂ ಗುರಿಯಾಗಬೇಕಾಯಿತು.
ಕೇವಲ ಬೇಕಾಬಿಟ್ಟಿ ಜಿಲ್ಲೆಗೆ ಬಂದೇ, ಹೋದೆ ಎನ್ನುವ ಭೇಟಿಯಿಂದ ಮಾರಣಾಂತಿಕ ಕೊರೊನಾ ಮಹಾಮಾರಿಯ ನಿಯಂತ್ರಣಕ್ಕೆ ಬೇಲಿ ಹಾಕಲು ಸಾಧ್ಯವೇ?. ಪ್ರತಿನಿತ್ಯ ಸಾಯುವ ಜನರಿಂದ ಮಸಣಗಳು ತುಂಬಿ ಹೋಗಿವೆ. ಇಂತಹ ದಾರುಣ ಸ್ಥಿತಿಯಲ್ಲಿಯೂ ಉಸ್ತುವಾರಿ ಸಚಿವರು ಮುಕ್ತವಾಗಿ ಪ್ರಗತಿ ಪರಿಶೀಲಿಸುವ ಧ್ರಾಷ್ಟ್ಯ ತೋರದಿರುವುದು ಆಕ್ರೋಶ ಮತ್ತಿಷ್ಟು ತೀವ್ರಗೊಳ್ಳುವಂತೆ ಮಾಡಿದೆ. ಕೇವಲ ಒಂದು ದಿನ ಭೇಟಿ ನೀಡಿ ಹೋಗುವುದರಿಂದ ಈ ಸಮಸ್ಯೆ ಬಗೆಹರಿಯದು. ಉಸ್ತುವಾರಿ ಸಚಿವರು ಸಭೆಯಲ್ಲಿ ಯಾವ ರೀತಿ ಇಲ್ಲಿಯ ನ್ಯೂನ್ಯತೆ ಸರಿಪಡಿಸುವ ಜವಾಬ್ದಾರಿ ನೀಡುತ್ತಾರೆ. ಇದರಿಂದ ಚಿಕಿತ್ಸಾ ವಿಧಾನದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಬೇಕಾಗಿದೆ.