ಉಸ್ತುವಾರಿ ಸಚಿವರ ಹೆಸರಲ್ಲಿ ಜಿಲ್ಲೆಯ ಬಹುತೇಕ ಅಧಿಕಾರಿಗಳಿಗೆ ಮೊಬೈಲ್ ಕರೆ : ಹಣಕ್ಕೆ ಬೇಡಿಕೆ – ಕಿರುಕುಳ

ರಾಮುಲು ಸಚಿವರಾಗಿದ್ದಾಗಲೂ ಇದೆ ರೀತಿ ಅಧಿಕಾರಿಗಳಿಗೆ ಹಣದ ಬೇಡಿಕೆ ಪ್ರಕರಣದ ಮಾದರಿಯಲ್ಲಿ ಮತ್ತೊಂದು ಕರೆ ಹಗರಣ
ರಾಯಚೂರು.ಆ.೦೪- ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿನಲ್ಲಿ ಜಿಲ್ಲೆಯ ಬಹುತೇಕ ಅಧಿಕಾರಿಗಳಿಗೆ ಕರೆ ಮಾಡಿ, ಹಣ ನೀಡುವಂತೆ ಕಿರುಕುಳ ಪ್ರಕರಣ ಈಗ ಜಿಲ್ಲೆಯ ಅಧಿಕಾರಿಗಳ ಮಧ್ಯೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ಅವರ ಗಮನಕ್ಕಿದೆಯೆ?.
ಬೇರೆ ಜಿಲ್ಲೆಯ ಸಚಿವರು ಉಸ್ತುವಾರಿ ಜವಾಬ್ದಾರಿ ವಹಿಸಿದ ಸಂದರ್ಭಗಳಲ್ಲಿ ಈ ರೀತಿಯ ಅವಘಡ ನಡೆಯುವುದು ಸಾಮಾನ್ಯ ಎನ್ನುವಂತಾಗಿದೆ. ಈ ಹಿಂದೆ ಶ್ರೀರಾಮುಲು ಅವರು ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಈ ರೀತಿಯ ಕರೆಗಳನ್ನು ಮಾಡಿ, ಅಧಿಕಾರಿಗಳಿಂದ ಹಣ ಮತ್ತು ಕಾಮಗಾರಿ ನೀಡುವಂತೆ ಒತ್ತಾಯಿಸಿದ ಘಟನೆಗಳು ನಡೆದಿದ್ದವು. ಇದು ಸುದ್ದಿಯಾಗುತ್ತಿದ್ದಂತೆ ತಕ್ಷಣವೆ ಎಚ್ಚೆತ್ತುಕೊಂಡು ಉಸ್ತುವಾರಿ ಸಚಿವರು ಈ ಕುರಿತು ಗಮನ ಹರಿಸುವಂತೆ ಮೇಲಾಧಿಕಾರಿಗಳಿಗೆ ಸೂಚನೆ ನೀಡಿ, ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಲಾಗಿತ್ತು.
ರಾಜ್ಯ ಕೃಷಿ ಸಚಿವರಾಗಿದ್ದ ಬಿ.ಸಿ.ಪಾಟೀಲ್ ಹೆಸರಲ್ಲೂ ಕೃಷಿ ಇಲಾಖೆಗೆ ಕರೆ ಮಾಡಿ, ನಾನು ಸಚಿವರ ಸಂಬಂಧಿ ತಾವು ಸೂಚಿಸಿದವರಿಗೆ ಕಾಮಗಾರಿ ನೀಡುವಂತೆ ಒತ್ತಾಯಿಸಿದ ಘಟನೆ ಬಗ್ಗೆಯೂ ಪತ್ರಿಕೆ ವರದಿ ಮಾಡಿತ್ತು. ಈಗ ಮುನೇನಕೊಪ್ಪ ಅವರ ಅಧಿಕಾರಾವಧಿಯಲ್ಲಿಯೂ ಇದೆ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ನೀಡಿದ ದೂರವಾಣಿ ಸಂಖ್ಯೆಯನ್ನು ಪರೀಕ್ಷಿಸಿದರೆ, ಮೈಸೂರು ಗಿರಿ ಎನ್ನುವ ಹೆಸರು ಟ್ರೂಕಾಲರ್‌ನಲ್ಲಿ ತೋರಿಸುತ್ತಿದೆ. ಇದೆ ನಂಬರ್‌ನಿಂದ ಕರೆ ಬರುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ಅಧಿಕಾರಿಗಳಂತೂ ಅವರ ಮಾತುಗಳನ್ನು ರೆಕಾರ್ಡ್ ಮಾಡಿದ್ದಾಗಿಯೂ ಹೇಳುತ್ತಿದ್ದು, ಅಗತ್ಯಬಿದ್ದರೆ ಇವುಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುತ್ತದೆಂದು ಮಾಹಿತಿ ನೀಡಿದ್ದಾರೆ. ಈ ದೂರವಾಣಿ ಕರೆ ಬಗ್ಗೆ ಕೆಲ ಅಧಿಕಾರಿಗಳೆ ಹೇಳುತ್ತಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಈ ಕುರಿತು ಗಂಭೀರವಾಗಿ ಪರಿಶೀಲಿಸುವ ಅಗತ್ಯವಿದೆ. ವಾಸ್ತವದಲ್ಲಿ ೯೯೧೬೨೨೭೭೭ ಉಸ್ತುವಾರಿ ಸಚಿವರಿಗೆ ಸಂಬಂಧಿಸಿದ ವ್ಯಕ್ತಿಯದ್ದಾಗಿದೆಯೆ? ಅಥವಾ ಯಾರೊ ವ್ಯಕ್ತಿಗಳು ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೆ?.
ಉದ್ದೇಶಿತ ಸಂಖ್ಯೆ ಉಸ್ತುವಾರಿ ಸಚಿವರ ಆಪ್ತರದ್ದಾಗಿದ್ದರೂ, ಈ ಸಂಖ್ಯೆಯಿಂದ ಬೇರೆ ಯಾರಾದರೂ ಕರೆ ಮಾಡಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆಯೆ ಎನ್ನುವ ಬಗ್ಗೆ ಪರಿಶೀಲಿಸುವ ಮೂಲಕ ಇದಕ್ಕೆ ಕಡಿವಾಣ ಹಾಕದಿದ್ದರೆ ಜನರ ಮಧ್ಯೆ ತಪ್ಪು ಸಂದೇಶ ರವಾನೆಗೆ ಕಾರಣವಾಗುತ್ತದೆ. ಜಿಲ್ಲೆಗೆ ಸಚಿವ ಸ್ಥಾನ ನೀಡದಿದ್ದರೆ ಆರ್ಥಿಕ, ಸಾಮಾಜಿಕ, ಕೈಗಾರಿಕೆ ಮತ್ತು ಶೈಕ್ಷಣಿಕ ಸೇರಿದಂತೆ ಇತರ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯಕ್ಕೆ ಗುರಿಯಾಗುವ ಕಳವಳ ಒಂದೆಡೆ ಇಲ್ಲಿಯ ಜನರದ್ದಾದರೆ, ಮತ್ತೊಂದೆಡೆ ಉಸ್ತುವಾರಿ ಸಚಿವರ ಹೆಸರು ಹೇಳಿಕೊಂಡು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಹಣ ನೀಡುವಂತೆ ಒತ್ತಾಯಿಸುವ ದಾರುಣಕ್ಕೆ ಜಿಲ್ಲೆ ಗುರಿಯಾಗುವಂತಹ ಪರಿಸ್ಥಿತಿಗೆ ರಾಜ್ಯ ಸರ್ಕಾರವೆ ಕಾರಣವಾಗಲಿದೆ.
ಬಹುತೇಕ ಅಧಿಕಾರಿಗಳು ಈ ಬಗ್ಗೆ ತಮ್ಮ ತಮ್ಮ ಮಧ್ಯೆ ಚರ್ಚಿಸಿಕೊಂಡಿದ್ದಾರೆ. ಕೆಲವರಂತೂ ತಮ್ಮ ಮೊಬೈಲ್‌ಗಳಲ್ಲಿ ಹಣ ಬೇಡಿಕೆಯ ಬಂದ ಕರೆಯನ್ನು ರೆಕಾರ್ಡ್ ಮಾಡಿದ್ದಾರೆ. ಕೆಲವರ ಬಳಿ ಇದನ್ನು ಕೇಳಿಸಿದಂತಹ ಘಟನೆಗಳು ಇವೆ. ಈ ಎಲ್ಲಾ ಮಾಹಿತಿಯನ್ನು ಉಸ್ತುವಾರಿ ಸಚಿವರ ಮುಂದೆ ಹೇಳಲು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರು ಇಂತಹ ಪ್ರಕರಣಗಳ ಬಗ್ಗೆ ತಕ್ಷಣವೆ ಗಮನ ಹರಿಸಿ, ಇದರ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಿ, ತಕ್ಷಣವೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಯೆ?.