ಉಸ್ತುವಾರಿ ಸಚಿವರ ಸಭೆ : ದದ್ದಲ್ ಗದ್ದಲ

ರಾಯಚೂರು.ಏ.೩೦- ಜಿಲ್ಲಾ ಉಸ್ತುವಾರಿ ಸಚಿವರ ಕೊರೊನಾ ಪ್ರಗತಿ ಪರಿಶೀಲನಾ ಸಭೆಗೆ ಸಂಬಂಧಿಸಿ ವಿಡಿಯೋ ಕಾನ್ಫ್‌ರೆನ್ಸ್ ಸಂವಾದಕ್ಕಾಗಿ ತಾಲೂಕು ಪಂಚಾಯತಿಯಲ್ಲಿ ಸುಮಾರು ಎರಡು, ಮೂರು ಗಂಟೆ ಕಾದು ಕುಳಿತಿದ್ದ ಗ್ರಾಮೀಣ ಶಾಸಕ ದದ್ದಲ್ ಬಸವನಗೌಡ ಅವರೊಂದಿಗೆ ಉಸ್ತುವಾರಿ ಸಚಿವರು ಸಂವಾದ ಸಮಯ ನೀಡದಿರುವುದರಿಂದ ಆಕ್ರೋಶಗೊಂಡ ಅವರು ನೇರವಾಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿ, ವಿಡಿಯೋ ಕಾನ್ಫ್‌ರೆನ್ಸ್‌ನಲ್ಲಿ ಉಸ್ತುವಾರಿ ಸಚಿವರ ಸಭೆಗೆ ಬಂದು ತಮ್ಮ ಆಕ್ರೋಶ ತೋಡಿಕೊಂಡ ಘಟನೆ ನಡೆಯಿತು.
ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ಪ್ರಕರಣಕ್ಕೆ ಸಂಬಂಧಿಸಿ ಸಚಿವರೊಂದಿಗೆ ಚರ್ಚಿಸಲು ದದ್ದಲ್ ಬಸವನಗೌಡ ಅವರು ಆನ್ ಲೈನ್ ಸಂವಾದಕ್ಕಾಗಿ ಕಾಯುತ್ತಿದ್ದರು. ಆದರೆ, ಎರಡು ಘಂಟೆಗೂ ಅಧಿಕ ಕಾಲ ಕಾದರೂ, ಉಸ್ತುವಾರಿ ಸಚಿವರು ಮಾತ್ರ ವಿರೋಧ ಪಕ್ಷದ ಕಾಂಗ್ರೆಸ್ ಶಾಸಕ ದದ್ದಲ ಬಸವನಗೌಡ ಅವರಿಗೆ ಸಮಯಾವಕಾಶ ನೀಡಲಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡ ಅವರು ನೇರವಾಗಿ ಸಭೆಗೆ ಆಗಮಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಎರಡು ಘಂಟೆಯಾದರೂ, ಸಂವಾದಕ್ಕೆ ಅವಕಾಶ ನೀಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಂತರ ಶಾಸಕರೊಂದಿಗೆ ಚರ್ಚಿಸಲಾಯಿತು. ಈ ಘಟನೆ ಕೆಲ ಸಮಯ ಸಭೆಯಲ್ಲಿ ಭಾರೀ ಗೊಂದಲಕ್ಕೆ ಕಾರಣವಾಯಿತು.