ಉಸ್ತುವಾರಿ ಸಚಿವರು ನಗರ ರಸ್ತೆ ವೀಕ್ಷಣೆ : ದುರಸ್ತಿ ಕ್ರಮ ಕೈಗೊಳ್ಳದಿದ್ದರೆ

15 ದಿನಗಳ ನಂತರ ಸಚಿವ, ಶಾಸಕರಿಗೆ ಸೀರೆ – ಬಳೆ ವಿತರಣೆ
ರಾಯಚೂರು.ಸೆ.16- ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ನಾಳೆ ನಗರಕ್ಕೆ ಆಗಮಿಸುತ್ತಿದ್ದು, ನಗರದ ರಸ್ತೆಗಳನ್ನು ವೀಕ್ಷಿಸಿ, ರಸ್ತೆ ಅಭಿವೃದ್ಧಿ ಕಾಮಗಾರಿಗೆ 15 ದಿನದಲ್ಲಿ ಕಾಮಗಾರಿ ಆರಂಭಿಸದಿದ್ದರೇ, ಸಚಿವರು ಮತ್ತು ಶಾಸಕ ಡಾ.ಶಿವರಾಜ ಪಾಟೀಲ್ ಅವರಿಗೆ ರೇಷ್ಮೆ ಸೀರೆ ಹಾಗೂ ಕೈಬಳೆ ನೀಡುವ ಆಂದೋಲನಾ ನಡೆಸಲಾಗುತ್ತದೆಂದು ಜಾದಳ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಅವರು ಎಚ್ಚರಿಸಿದ್ದಾರೆ.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈಗಾಗಲೇ ಸಚಿವರು ಮತ್ತು ಶಾಸಕರಿಗಾಗಿ ಖರೀದಿಸಿದ ಹಸಿರು ಸೀರೆ, ಕುಬುಸ ಮತ್ತು ಕೆಂಪು ಬಣ್ಣದ ಕೈ ಬಳೆ ಪ್ರದರ್ಶಿಸಿ, ಇವುಗಳನ್ನು ಸಚಿವರು ಮತ್ತು ಶಾಸಕರಿಗೆ ನೀ‌ಡಲಾಗುತ್ತದೆಂದು ಘೋಷಿಸಿದರು. ನಗರದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಯಾವ ರಸ್ತೆ ಮತ್ತು ಬಡಾವಣೆಗಳಿಗೆ ಹೋಗದೂ, ನರಕಸದೃಶ್ಯ ವಾತಾವರಣವಿದೆ. ನಗರವೇ ಸಂಪೂರ್ಣ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಬಸವೇಶ್ವರ ವೃತ್ತದಿಂದ ಆರ್‌ಟಿಓ ವರೆಗಿನ ರಸ್ತೆ ಬಿಟ್ಟರೇ. ನಗರದ ಮಚ್ಚಿ ಬಜಾರ್, ತೀನ್ ಖಂದಿಲ್ ಸೇರಿದಂತೆ ಎಲ್ಲಾ ರಸ್ತೆಗಳು ಹದಗೆಟ್ಟು ಸಂಚಾರ ಅಸಾಧ್ಯ ಎನ್ನುವಂತಹ ದುಸ್ಥಿತಿಯಲ್ಲಿವೆ.
ಕಳೆದ ಸಲ ಲಕ್ಷ್ಮಣ ಸವದಿ ಅವರು ಜಿಲ್ಲೆ ಭೇಟಿ ಸಂದರ್ಭದಲ್ಲಿ ಹದಗೆಟ್ಟ ರಸ್ತೆಗಳ ಪರಿಸ್ಥಿತಿ ಅವರ ಗಮನಕ್ಕೆ ತಂದಿದ್ದೇವೆ. ಸಚಿವರು, ಶಾಸಕರ ವಿರುದ್ಧ ಧಿಕ್ಕಾರ ಕೂಗಿದ್ದೇವೆ. ಆದರೆ, ಇಲ್ಲಿವರೆಗೂ ಯಾವುದೇ ಉಪಯೋಗವಾಗಿಲ್ಲ. ಡಾ.ಶಿವರಾಜ ಪಾಟೀಲ್ ರಸ್ತೆ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಶಾಸಕ ಡಾ.ಶಿವರಾಜ ಪಾಟೀಲ್ ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಒಂದು ಕಾಮಗಾರಿ ಹೆಸರಲ್ಲಿ ಮೂರು ಇಲಾಖೆಗಳಲ್ಲಿ ಬಿಲ್ ಎತ್ತುವಳಿ ಮಾಡಿದ ದಾಖಲೆಗಳನ್ನು ಧಾರವಾಹಿ ರೀತಿಯಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ.
ವಾರ್ಡಗಳಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುವುದನ್ನು ಸ್ವತಃ ಶಾಸಕ ಡಾ.ಶಿವರಾಜ ಪಾಟೀಲ್ ಅವರು ವಾರ್ಡಗಳಿಗೆ ಭೇಟಿ ನೀಡಿ, ಪರಿಶೀಲಿಸಲಿ. ಅಲ್ಲಿ ಕಾಮಗಾರಿ ಆಗಿಲ್ಲ ಎನ್ನುವುದನ್ನು ನಾನು ಸಾಬೀತು ಪಡಿಸುತ್ತೇನೆಂದು ಸವಾಲ್ ಎಸೆದಿದ್ದಾರೆ. ಇತ್ತೀಚಿಗೆ ಶಾಸಕರು ಬಿಡುಗಡೆ ಮಾಡಿದ 56 ಕೋಟಿ ಅನುದಾನ ಪಟ್ಟಿಯಲ್ಲಿ ವಾರ್ಡ್ 5 ಕ್ಕೆ 5.92 ಕೋಟಿ ಮತ್ತು ವಾರ್ಡ್ 6 ಕ್ಕೆ 3 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ. ಈ ವಾರ್ಡಗಳಲ್ಲಿ ಯಾವ ಅಭಿವೃದ್ಧಿ ಕಾಮಗಾರಿಗಳಾಗಿವೆ ಎನ್ನುವುದನ್ನು ತೋರಿಸಲಿ.
ಜಾದಳ ಪಕ್ಷದಿಂದ ನಾಳೆಯಿಂದ ಪ್ರತಿ ವಾರ್ಡಿಗೆ ಭೇಟಿ ನೀಡಿ, ಅಲ್ಲಿಯ ಅಭಿವೃದ್ಧಿಯಿಂದ ಜನರಿಂದಲೇ ಕೇಳಿ ತಿಳಿದು, ಪಟ್ಟಿ ಮಾಡಲಾಗುತ್ತದೆ. ವಾರ್ಡ್ ಅಭಿವೃದ್ಧಿ ಹೆಸರಲ್ಲಿ ಯಾವ ರೀತಿಯ ಅವ್ಯವಹಾರವಾಗಿದೆ ಎನ್ನುವುದನ್ನು ದಾಖಲೆ ಸಮೇತ ತೋರಿಸಲಾಗುತ್ತದೆಂದು ಹೇಳಿದ ಅವರು, ನಗರದಲ್ಲಿ ಜನರಿಗೆ ಉತ್ತಮ ರಸ್ತೆ ಬೇಕು ಎನ್ನುವ ಹೋರಾಟವನ್ನು ಜಾದಳ ನಡೆಸಲಿದೆ. ಶಿವರಾಜ ಪಾಟೀಲ್ ಅವರು, ಕೊರೊನಾ ವಿಷಯಕ್ಕೆ ಸಂಬಂಧಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ, ತಾವು ಪ್ರತಿನಿಧಿಸುವ ನಗರದ ರಸ್ತೆ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವಿಫಲರಾಗಿರುವುದು ಜನರಲ್ಲಿ ಆಕ್ರೋಶ ಮೂಡುವಂತೆ ಮಾಡಿದೆ.
ಶಾಸಕರ ಭ್ರಷ್ಟಾಚಾರದ ಎಲ್ಲಾ ದಾಖಲೆಗಳು ನನ್ನ ಬಳಿಯಿದ್ದು, ಇವುಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಲೂಟಿಯನ್ನು ಜನರ ಮುಂದಿಡಲಾಗುತ್ತದೆ. ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರು, ನಗರದ ರಸ್ತೆಗಳನ್ನು ವೀಕ್ಷಿಸಿ, ಮುಂದಿನ ಕ್ರಮ ಕೈಗೊಳ್ಳದಿದ್ದರೇ, ಜಾದಳದಿಂದ ನೀಡುವ ಸೀರೆ, ಬಳೆ ತೊಡಿಸುವ ಆಂದೋಲನಾ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು. ಮುಸ್ಲಿಂ ಬಡಾವಣೆಗಳಿಗೆ ಅನುದಾನ ಕಡಿತಗೊಳಿಸುವ ಮೂಲಕ ಸಂವಿಧಾನದತ್ತ ಅಧಿಕಾರವನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ. ಈ ತಾರತಮ್ಯವನ್ನು ಜಾದಳ ಪಕ್ಷ ಖಂಡಿಸುತ್ತದೆ.
ಈ ಸಂದರ್ಭದಲ್ಲಿ ಎನ್.ಶಿವಶಂಕರ್ ವಕೀಲ್, ದಾನಪ್ಪ ಯಾದವ್, ವಿಶ್ವನಾಥ ಪಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.