ಉಸ್ತುವಾರಿ ಸಚಿವರು ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿ-ಡಾ.ವೈಎಎನ್

ಕೋಲಾರ,ಮೇ.೩: ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತು ಗಂಭೀರವಾಗಿ ಪರಿಗಣಿಸಿ, ಇಲ್ಲೇ ಮೊಕ್ಕಾಂ ಹೂಡಿ ಸೋಂಕು ತಡೆ ಹಾಗೂ ಜೀವ ರಕ್ಷಣೆಗೆ ಅಗತ್ಯವಾದ ಮೂಲಸೌಕರ್ಯಗಳ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಮನವಿಗೆ ಸ್ಪಂದಿಸಿ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಎಂಟಿ.ಬಿ.ನಾಗರಾಜ್ ಅವರನ್ನು ನೇಮಿಸಿರುವುದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ತೀವ್ರಗತಿಯಲ್ಲೇ ಏರಿಕೆಯಾಗುತ್ತಿದೆ, ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್,ವೆಂಟಿಲೇಟರ್ ಸಮಸ್ಯೆ ಕಾಡುತ್ತಿದೆ, ಈ ಹಿನ್ನಲೆಯಲ್ಲಿ ನೂತನ ಉಸ್ತುವಾರಿ ಸಚಿವರಿಗೆ ಹೆಚ್ಚಿನ ಹೊಣೆ ಇದೆ ಎಂದು ತಿಳಿಸಿದ್ದಾರೆ.
ಕೋವಿಡ್ ಮಾರಿಯ ಅಟ್ಟಹಾಸದಿಂದ ಜಿಲ್ಲೆಯಲ್ಲಿ ಸಾವಿನ ಪ್ರಮಾಣವೂ ಹೆಚ್ಚಾಗಿದೆ, ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ಸಿಗದೇ ಹಲವರ ಸಾವು ಸಂಭವಿಸಿದ್ದರೆ ಮತ್ತೆ ಕೆಲವು ಪ್ರಕರಣಗಳಲ್ಲಿ ಆಕ್ಸಿಜನ್ ಸಮರ್ಪಕ ನಿರ್ವಹಣೆಯಲ್ಲಿನ ವೈಫಲ್ಯದಿಂದಲೂ ಸಾವಾಗಿದೆ ಇದನ್ನು ಗಂಭೀರವಾಗಿ ಪರಿಗಣಿಸಿ ಸಚಿವರು ಕಾರ್ಯೋನ್ಮುಖವಾಗಬೇಕು ಎಂದು ತಿಳಿಸಿದ್ದಾರೆ.
ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಿ, ಇರುವ ವೈದ್ಯರು, ಶುಶ್ರೂಕಿಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ವೇತನ,ಭತ್ಯೆ ಹೆಚ್ಚಿಸುವ ಮೂಲಕ ಉತ್ಸಾಹ ತುಂಬಿ ಜನರ ಜೀವ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರೋಗಿಗಳಿಗೆ ಆಕ್ಸಿಜನ್,ಬೆಡ್,ವೆಂಟಿಲೇಟರ್ ಸಿಗದೇ ತೀವ್ರ ಸಂಕಷ್ಟಡ ಎದುರಾಗಿದೆ, ಇಂತಹ ಸಂದರ್ಭದಲ್ಲಿ ಇಲ್ಲಿನ ಎಲ್ಲಾ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನೂ ಪೂರ್ಣಪ್ರಮಾಣದಲ್ಲಿ ಕೋವಿಡ್‌ಗಾಗಿ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಮೂಲಕ ಕ್ರಮವಹಿಸಲು ಸಲಹೆ ನೀಡಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಇರುವ ವೆಂಟಿಲೇಟರ್ ಸಮರ್ಪಕ ಬಳಕೆಗೆ ಕ್ರಮ ಕೈಗೊಳ್ಳಿ, ವೆಂಟಿಲೇಟರ್‍ಗಳ ಸಂಖ್ಯೆ ಹೆಚ್ಚಿಸಿ, ಜನರ ಜೀವ ಉಳಿಸಲು ಪ್ರಾಮಾಣಿಕವಾಗಿ ಸ್ಪಂದಿಸಿ ಎಂದು ಕೋರಿದ್ದಾರೆ.ಜತೆಗೆ ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಸರಬರಾಜಾಗುವಂತೆ ಮಾಡಿ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಸಿಗುವಂತೆ ಮಾಡುವಲ್ಲಿಯೂ ಉಸ್ತುವಾರಿ ಸಚಿವರು ಗಮನಹರಿಸಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉಸ್ತುವಾರಿ ಸಚಿವರು ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲೇ ಉಳಿದುಕೊಂಡು ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಈ ನಿಟ್ಟಿನಲ್ಲಿ ಎಂಡಿಬಿ. ನಾಗರಾಜ್ ಅವರು ಕಾರ್ಯನಿರ್ವಹಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.