ಉಸುಕಿನ ಟಿಪ್ಪರ್ ಹರಿದು ದಂಪತಿ ಸಾವು, ಮಗು ಪಾರು

ಕಲಬುರಗಿ,ಏ.22-ಬೈಕ್ ಮೇಲೆ ಉಸುಕು ತುಂಬಿದ್ದ ಟಿಪ್ಪರ್ ಹರಿದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಮೃತಪಟ್ಟು, 3 ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿ ಅನಾಥವಾಗಿರುವ ಹೃದಯ ವಿದ್ರಾವಕ ಘಟನೆ ನಗರದ ರಾಮಮಂದಿರ ಹತ್ತಿರ ಶುಕ್ರವಾರ ಸಾಯಂಕಾಲ ನಡೆದಿದೆ.
ಮೃತರನ್ನು ಶರಣಸಿರಸಗಿ ಮಡ್ಡಿಯ ರಾಣೋಜಿ ಸಿದ್ರಾಮಪ್ಪ ವಡ್ಡರ್ (45) ಮತ್ತು ಅವರ ಪತ್ನಿ ಸುಜಾತಾ ರಾಣೋಜಿ ವಡ್ಡರ್ (35) ಎಂದು ಗುರುತಿಸಲಾಗಿದೆ. 3 ವರ್ಷದ ಮಗು ಮಲ್ಲಿಕಾರ್ಜುನ ರಾಣೋಜಿ ವಡ್ಡರ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ.
ಮೃತ ದಂಪತಿ ಮಗು ಸಮೇತ ಬೈಕ್ ಮೇಲೆ ತೆರಳುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದಿದೆ. ಟಿಪ್ಪರ್ ಚಕ್ರದಡಿ ಸಿಲುಕಿ ಪತಿ-ಪತ್ನಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಅದೃಷ್ಟವಶಾತ್ ಮಗು ವಾಹನದ ಕೆಳಗೆ ಸಿಲುಕದ ಪರಿಣಾಮ
ಪ್ರಾಣಾಪಾಯದಿಂದ ಪಾರಾಗಿದೆ. ಘಟನೆ ನಂತರ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಧ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.