ಉಸಿರು ಹೋದಮೇಲೆ ಮಲಗುವುದು ಇದ್ದೇ ಇದೆ ಉಸಿರು ಇರುವ ತನಕ ಕಾಯಕಮಾಡು:ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳು

ಭಾಲ್ಕಿ :ನ.23:ನಾವು ಜೀವನದಲ್ಲಿ ಬದುಕಬೇಕಾದರೆ ವ್ಯಾಪಾರ ಮಾಡುವುದು ಎಂದರೆ ಕೆಲಸ ಮಾಡುವುದು.
ವ್ಯವಹಾರ ಮಾಡಿ ಸಂಸಾರದ ಸ್ಥಿತಿ ಕಳೆಯದಿದ್ದರೆ ವ್ಯವಹಾರವೇ ಕೇಡು, ಲಾಭ ಹೊಂದಬೇಕು, ನಿಷ್ಠೆಯಿಂದ ಮಾಡಬೇಕು ನಿಷ್ಠೆಯಿಂದ ಕೆಲಸ ಮಾಡಿದರೆ ಲಾಭ ಸಿಗುತ್ತದೆ. ಓಲಗವ ಮಾಡಿ ಸಂಸಾರ ಸ್ಥಿತಿ ಕಳೆಯದಿದ್ದರೆ ಆ ಓಲಗವೇ ಕೇಡು. ಓಲಗ ಎಂದರೆ ಉದ್ಯೋಗ. ಯಾವುದೇ ಕೆಲಸ ಇರಲಿ ತಿಂಗಳೆಲ್ಲಾ ದುಡಿಯುವುದು ಸಂಬಳಕ್ಕಾಗಿ, ಸಂಸಾರಕ್ಕೆ ಸಾಕಾಗುವಷ್ಟು ಸಂಬಳ ಸಿಗದಿದ್ದರೆ ಉದ್ಯೋಗದಿಂದ ಏನು ಪ್ರಯೋಜನ, ಮನೆಯ ಖರ್ಚು ತಿಂಗಳಿಗೆ 20 ಸಾವಿರ ಇದ್ದು ಸಂಪಾದನೆ 10 ಸಾವಿರ ಇದ್ದರೆ ಮನೆ ಹೇಗೆ ನಡೆಯುವುದು. ಮನೆಗೊಬ್ಬ ಕೆಲಸಮಾಡಿ ಹತ್ತು ಜನ ಉಣ್ಣುವುದಾದರೆ ಸಂಸಾರ ನಡೆಯುವುದು ಹೇಗೆ.? ನಾವು ಯಾರಾದರೂ ಆಗಿರಲಿ ಕೆಲಸ ಮಾಡಬೇಕು. ನಾವು ಯಾವುದಾದರೂ ಕೆಲಸ ಮಾಡಿದರೂ ಆಲೋಚನೆ ಮಾಡಿ ಕೆಲಸ ಮಾಡಬೇಕು. ಕ್ರಿಯಾಶೀಲತೆ ಜೀವಂತಿಕೆಯ ಲಕ್ಷಣ. ಯಾವುದೇ ಕಾಯಕದಲ್ಲಿ ತೊಡಗುವುದು, ಯಾವುದೇ ಪರಿಶ್ರಮ ಪಡುವುದು ಅದು ಜೀವನದ ಸಾರ ಅವನೇ ಮನುಷ್ಯ. ಯಾರು ಕೆಲಸ ಮಾಡುವುದಿಲ್ಲ ಅವರು ಶವಕ್ಕೆ ಸಮಾನ.
ಕಬೀರದಾಸರು ಹೇಳುತ್ತಾರೆ,
“ಮಲಗುವುದಾದರೆ ಏನು ಬಂತು ಎದ್ದು ಜಪವ ಮಾಡು,
ಮಲಗುವುದಾದರೆ ಏನು ಬಂತು ಎದ್ದು ಜಪವ ಮಾಡು,
ಮಲಗಲು ಒಂದು ದಿನ ಬರುವುದು ಕಾಲುದ್ದಕ್ಕೆ ಚಾಚಿ ಕಬೀರ ಕಾಲುದ್ದಕ್ಕೆ ಚಾಚಿ.”
ಉಸಿರು ಹೋದರೆ ಕಾಲುಚಾಚಿ ಮಲಗುವುದು ಇದ್ದೇ ಇದೆ ಸತ್ತ ಮೇಲೆ ಮಾತನಾಡಲು ಬರುವುದಿಲ್ಲ, ಕೆಲಸ ಮಾಡಲು ಬರುವುದಿಲ್ಲ ಏನನ್ನು ಬರುವುದಿಲ್ಲ. ಆದ್ದರಿಂದ ಇದ್ದಾಗಲೇ ಕೆಲಸ ಮಾಡು, ಈ ಕ್ಷಣವೇ ನಮ್ಮ ಜೀವನ.
ನೀರ ಮೇಲಿನ ಗುಳ್ಳೆ, ಗಾಳಿಗಿಟ್ಟ ದೀಪ ನಮ್ಮ ಜೀವನ ಒಂದೇ, ಇಂತಹ ಬದುಕನ್ನು ನಾವು ಶ್ರಮಿಸುತ್ತಾ ಭಕ್ತಿಯಿಂದ ಕೆಲಸ ಮಾಡುತ್ತಾ ಬದುಕಬೇಕು.
ಭಕ್ತಿಯ ಮಾಡಿ ಜನನ-ಮರಣ ವಿರಹಿತನಾಗದಿದ್ದಡೆ ಆ ಭಕ್ತಿಯೇ ಕೇಡು ಕೂಡಲಸಂಗಮದೇವ.
ಭಕ್ತಿಯನ್ನು ಮಾಡುತ್ತಿದ್ದೇವೆ ಆದರೆ ಭಕ್ತಿಯಿಂದ ನಮಗೆ ಏನು ಲಾಭವಾಗದಿದ್ದರೂ ಏನು ಪ್ರಯೋಜನ, ಯಾರದೊ ನಿಂದೆಯ ಮಾಡಿ ಲಿಂಗ ಪೂಜೆ ಮಾಡಿದರೆ ಏನು ಲಾಭ,
ಮಾಡುವ ಕೆಲಸಗಳನ್ನು ಮುಗಿಸಿ ನಂತರ ಪೂಜೆಗೆ ಕೂಡುವುದು ಇಲ್ಲವಾದರೆ ಪೂಜೆಯಲ್ಲಿ ಮನ ನಿಲ್ಲುವುದಿಲ್ಲ.
ಜಂಗಮ ಬರಬೇಕೆಂದು ಲಿಂಗಾರ್ಚನೆಯ ಮಾಡುವುದು
ಆ ಜಂಗಮ ಬಂದರೆ ಲಿಂಗಾರ್ಚನೆಯ ಬಿಡುವುದು ಜಂಗಮಾರ್ಚನೆಯ ಮಾಡಬೇಕು. ಲಿಂಗದಲ್ಲಿ ಏನುಂಟು ಜಂಗಮದಲ್ಲಿ ಏನುಂಟು ಎಂದರೆ, ಲಿಂಗದಲ್ಲಿ ಫಲವುಂಟು, ಕುಲ ಉಂಟು ಛಲವುಂಟು, ಭವಉಂಟು, ಜಂಗಮದಲ್ಲಿ ಫಲವಿಲ್ಲ ಕುಲವಿಲ್ಲ ಛಲವಿಲ್ಲ ಭವವಿಲ್ಲ. ಇದು ಕಾರಣ ಕೂಡಲ ಚೆನ್ನಸಂಗಯ್ಯನಲ್ಲಿ ಜಂಗಮವೇ ಲಿಂಗವೆಂದು ನಂಬಿದವನಾಗಿ ಬಸವಣ್ಣ ಸ್ವಲಿಂಗವಾದ.
ಬಂದಂತಹ ಕೆಲಸಗಳನ್ನು ಮಾಡಿ ಮುಗಿಸಿದ ನಂತರ ಲಿಂಗಪೂಜೆ ಮಾಡಬೇಕು. ಎದುರಿನ ಪ್ರಸಂಗ ಸನ್ನಿವೇಶಗಳನ್ನು ನೋಡಿ ಅರ್ಥೈಸಿಕೊಂಡು ಜಪ ಸಾಧನೆಯಲ್ಲಿ ತೊಡಗುವುದೇ ಹೊರತು ಸಾಧನೆಯೇ ಎಲ್ಲಾ ಎಂದು ಬದುಕುವುದು ವ್ಯರ್ಥ, ಅದಕ್ಕೆ ಸಮಯ ಕೊಡುವುದು ವ್ಯರ್ಥ. ಜೀವನದಲ್ಲಿ ಸುಖ ನೆಮ್ಮದಿ ಸಿಗುವುದಿಲ್ಲ.
ಪೂಜ್ಯ ಶ್ರೀ ನಿರಂಜನ ದೇವರು
ತಮ್ಮ ಅನುಭಾವವನ್ನು ನೀಡಿದರು. ಭಾಲ್ಕಿಯ ಶ್ರೀ ಚನ್ನಬಸವ ಆಶ್ರಮದಲ್ಲಿ 271ನೆಯ ಮಾಸಿಕ ಶರಣ ಸಂಗಮ ಕಾರ್ಯಕ್ರಮ ಜರಗಿತು.ಇದೆ ಸಮಯದಲ್ಲಿ ಪ್ರಸಾದ ದಾಸೋಹ ವ್ಯವಸ್ಥೆಯನ್ನು ಗೈದ ಉಮಾದೇವಿ ಶಿವಕುಮಾರ ಸಾವಳೆ ಅವರನ್ನು ಸನ್ಮಾನಿಸಲಾಯಿತು.
ಶಾಂತಾಯ್ಯಾ ಸ್ವಾಮಿ ಉಪಸ್ಥಿತರಿದ್ದರು.
ದೀಪಕ ಥಮಕೆ ನಿರೂಪಿಸಿದರು.