ಉಸಿರುಗಟ್ಟಿ ಒಂದೇ ಕುಟುಂಬದ 6 ಮಂದಿ ಸಾವು

ನವದೆಹಲಿ, ಮಾ.೩೧-ಸೊಳ್ಳೆ ಕಾಯಿಲ್ ನಿಂದ ಉಸಿರುಗಟ್ಟಿ ಒಂದೇ ಕುಟುಂಬದ ಆರು ಮಂದಿ ಕೊನೆಯುಸಿರೆಳೆದಿರುವ ದಾರುಣ ಘಟನೆ ದೆಹಲಿಯ ಶಾಸ್ತ್ರೀ ಪಾರ್ಕ್ ಪ್ರದೇಶದಲ್ಲಿ ಜರುಗಿದೆ.
ಸೊಳ್ಳೆ ಕಾಯಿಲ್ ನಿಂದ ಉಸಿರುಗಟ್ಟಿ ನಾಲ್ವರು ಪುರುಷರು, ಒಬ್ಬಳು ಮಹಿಳೆ ಹಾಗೂ ಒಂದು ಮಗು ಸೇರಿದಂತೆ ಆರು ಮಂದಿ ವಿಧಿವಶರಾಗಿದ್ದಾರೆ. ಇದರಲ್ಲಿ ೧೫ ವರ್ಷದ ಬಾಲಕಿ ಹಾಗೂ ೪೫ ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಈ ದುರ್ಘಟನೆ ನಡೆದಿದ್ದು, ಮೇಲ್ನೋಟಕ್ಕೆ ಮಕ್ಕಳು ಸೇರಿದಂತೆ ಆರು ಮಂದಿ ಉಸಿರುಗಟ್ಟಿ ಇಹಲೋಕ ತ್ಯಜಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಸಿಪಿ ಸಂಧ್ಯಾ ಸ್ವಾಮಿ, ಸೊಳ್ಳೆ ನಿವಾರಕ ಸುಡುವುದರಿಂದ ಉಂಟಾದ ಬೆಂಕಿಯಿಂದ ಮಗು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ. ಇನ್ನಿಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.
ಸೊಳ್ಳೆ ಓಡಿಸಲು ಬತ್ತಿ ಹಚ್ಚಿದ್ದು, ಮಧ್ಯರಾತ್ರಿ ಬತ್ತಿ ಉರುಳಿ ಹಾಸಿಗೆ ಮೇಲೆ ಬಿದ್ದಿದೆ. ವಿಷಕಾರಿ ಹೊಗೆಯಿಂದಾಗಿ ಮನೆಯಲ್ಲಿದ್ದವರೆಲ್ಲ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಘಟನೆ ನಡೆಯುವ ಸಂದರ್ಭದಲ್ಲಿ ಮನೆಯಲ್ಲಿ ಒಟ್ಟು ಎಂಟು ಮಂದಿ ಇದ್ದಿದ್ದು, ಇದರಲ್ಲಿ ಮಕ್ಕಳು ಸೇರಿದಂತೆ ಆರು ಜನರು ವಿಧಿವಶರಾಗಿದ್ದಾರೆ. ಉಳಿದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೃತರ ಸಂಬಂಧಿಕರು ಹೇಳಿದ್ದಾರೆ.