ಉಸಿರಿಗೆ ಆಸರೆಯಾಗಿರುವುದು ಪರಿಸರ

ಗಬ್ಬೂರು.ಜೂ.೧೦-ಮಾನವನ ಜೀವನದ ಆಧಾರವೆಂದರೆ ಅವನ ಉಸಿರು, ಆ ಉಸಿರಿಗೆ ಆಸರೆಯಾಗಿರುವುದು ಪರಿಸರ.ಅಂತಹ ಜೀವನದ ಜೀವನಾಡಿಯಾಗಿರುವ ಪರಿಸರವನ್ನು ಇಂದು ರಕ್ಷಿಸುವ ಕಾರ್ಯ ನಾವೆಲ್ಲ ಮಾಡಬೇಕಿದೆ ಎಂದು ದೇವದುರ್ಗ ವಲಯ ಅರಣ್ಯಾಧಿಕಾರಿಗಳಾದ ಅಲಿಯೋದ್ದಿನ್ ಹೇಳಿದರು. ದೇವದುರ್ಗ ಕೆಎಸ್‌ಆರ್ ಟಿಎಸ್ ಬಸ್ ಡೀಪೊ ಮೈದಾನದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಿ ಸಸಿ ನೆಟ್ಟು ಮಾತನಾಡಿದರು.ಉಪ ವಲಯ ಅರಣ್ಯಾಧಿಕಾರಿಯಾದ ಮೋನಪ್ಪರೆಡ್ಡಿ ಮಾತನಾಡಿ, ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿ, ಅದನ್ನು ಆಚರಣೆಯಲ್ಲಿ ತಂದರೆ ಮಾತ್ರ ಪರಿಸರದ ಸಂರಕ್ಷಣೆ ಸಾಧ್ಯವಾಗುತ್ತದೆಯೆಂದು ನುಡಿದರು. ಡೀಪೋ ಮ್ಯಾನೇಜರ್ ಸಿದ್ದಣ್ಣ, ಅರಣ್ಯ ರಕ್ಷಕ ರಾಘವೇಂದ್ರ, ರಾಠೋಡ್, ಸಾರಿಗೆ ಇಲಾಖೆಯ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.