ಉಷ್ಣತೆ ನಿಯಂತ್ರಿಸಲು ಅರಣ್ಯ ಮತ್ತು ಜಲ ರಕ್ಷಿಸುವುದು ಅಗತ್ಯ: ಸಿಂಗೋಡೆ

ಬೀದರ:ಮಾ.24: ಅರಣ್ಯ ನಿಸರ್ಗದ ಅತ್ಯಮೂಲ್ಯವಾದ ಕೊಡುಗೆ, ಅರಣ್ಯಗಳು ಮಣ್ಣನ್ನು ಸಂರಕ್ಷಿಸುವ ಹೊದಿಕೆಗಳಂತೆ ತೇವ, ಉಷ್ಣತೆ ನಿಯಂತ್ರದಲ್ಲಿಟ್ಟು, ಹವಾಮಾನದ ಮೇಲೆ ಪ್ರಭಾವ ಬೀರುತ್ತದೆ ಎಂದು ಉಪ ವಲಯ ಅರಣ್ಯ ಅಧಿಕಾರಿ ನಾಗೇಂದ್ರನಾಥ ಸಿಂಗೋಡೆ ತಿಳಿಸಿದರು.
ನಮ್ಮ ದೇಶಕ್ಕೆ ಬೇಕಾಗಿರುವ ಶೇ. 33% ಭಾಗ ಅರಣ್ಯ, ಆದರೆ ಶೇ. 10% ರಷ್ಟು ಮಾತ್ರ ಉಳಿದಿದೆ. ಆದ್ದರಿಂದ ಸರಕಾರ ಕೃಷಿ ಪ್ರೋತ್ಸಾಹ ಯೋಜನೆಯನ್ನು ಹಮ್ಮಿಕೊಂಡಿದೆ. ಇದನ್ನು ಎಲ್ಲರೂ ಸದುಪಯೋಗಿಸಿಕೊಂಡು ಸಸಿಗಳನ್ನು ನೆಡುವುದರ ಮೂಲಕ ಮರು ಅರಣ್ಣೀಕರಣ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರ ಅಳಿಲು ಸೇವೆ ಬಹಳ ಅವಶ್ಯಕವಾಗಿದೆ ಎಂದು ಉಪ ವಲಯ ಅರಣ್ಯ ಅಧಿಕಾರಿ ನಾಗೇಂದ್ರನಾಥ ಸಿಂಗೋಡೆ ತಿಳಿಸಿದರು.
ತಥಾಗತ ನೌಕರರ ಮಿತ್ರ ಮಂಡಳಿ ಹಾಗೂ ಮಹಾತ್ಮಾ ಜ್ಯೋತಿಬಾ ಫುಲೆ ಸ್ವ ಸಹಾಯ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನೌಬಾದನ ತಥಾಗತ ನೌಕರರ ಕಾರ್ಯಾಲಯದಲ್ಲಿ ಆಯೋಜಿಸಿರುವ ವಿಶ್ವ ಅರಣ್ಯ ಮತ್ತು ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ಹಾಗೂ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಸಂಯೋಜಕ ಸಂಜೀವಕುಮಾರ ಸ್ವಾಮಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿ, ವಿಶ್ವದ ಸಕಲ ಜೀವ ರಾಶಿಗಳಿಗೆ “ಜಲವೇ ಜೀವನಾಧಾರ, ಜಲವೇ ಸಂಜೀವಿನಿ” ನಮ್ಮ ಭಾರತದಲ್ಲಿ ನೀರಿಗೆ ದೇವಿಯ ಸ್ಥಾನ ನೀಡಲಾಗಿದೆ. ಭೂಮಿ ಮಾತ್ರ ಮಾನವನ ಯೋಗ್ಯತಾಣ ಹಾಗೂ ನೀರು ಸಿಗುವ ಏಕೈಕ ಗೃಹ. ನಾವು ಪೋಲು ಮಾಡುವ ಒಂದೊಂದು ಹನಿ ನೀರು ಅತ್ಯಮೂಲ್ಯವಾದದ್ದು, ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನೀರನ್ನು ಮಿತಬಳಕೆ ಮಾಡುವ ಹಾಗೂ ಲಭ್ಯವಿರುವ ಅತ್ಯಲ್ಪ ಜೀವ ಜಲವನ್ನು ಸುರಕ್ಷಿತವಾಗಿ ಸಂರಕ್ಷಿಸುವ ಸಂಕಲ್ಪ ಮಾಡೋಣ. ಅಮೃತಕ್ಕೆ ಸಮಾನವಾದ ನೀರನ್ನು ನಾವು ಮಾತ್ರವಲ್ಲದೇ ನಮ್ಮ ಮುಂದಿನ ಜನಾಂಗಕ್ಕೂ ಕೂಡ ಉಳಿಸೋಣ ಎಂದರು.
ತಥಾಗತ ನೌಕರರ ಮಿತ್ರ ಮಂಡಳಿಯ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಮಾತನಾಡಿ, ಅರಣ್ಯ ಎಂದರೆ ನಿಗೂಢ ಜಗತ್ತು, ಅಮೂಲ್ಯ ಸಸ್ಯ ಸಂಪತ್ತು, ಜೀವ ವೈವಿಧ್ಯತೆಯ ತಾಣವಾಗಿರುವ ಅರಣ್ಯ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ನಾವೆಲ್ಲರು ಕಡ್ಡಾಯವಾಗಿ ನಮ್ಮ ನಮ್ಮ ಜನ್ಮ ದಿನವನ್ನು ಸಸಿ ನೆಡುವುದರ ಮೂಲಕ ಆಚರಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಸುನೀಲ ಗಾಯಕವಾಡ, ಅತಿಥಿಗಳಾದ ಅರುಣ ಪಾಟೀಲ ಮತ್ತು ಗಣಪತಿ ಭಕ್ತಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನಾಮನಿರ್ದೇಶನಗೊಂಡ ಪದಾಧಿಕಾರಿಗಳಾದ ಚಂದ್ರಕಾಂತ ದಂಡೆ, ಸುನೀಲ ಶಿಂಧೆ ಹಾಗೂ ಇಲೇಶಕುಮಾರ ಸೋನಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರೂಪಣೆ ತಾತ್ಯಾರಾವ ಕಾಂಬಳೆ ನಿರ್ವಹಿಸಿದರೆ, ಶಿವಕುಮಾರ ಸದಾಫುಲೆ ಸರ್ವರಿಗೂ ಸ್ವಾಗತಿಸಿದರು ಹಾಗೂ ಸತೀಶ ಸೂರ್ಯವಂಶಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕಪೀಲ ಶಿಂಧೆ, ಭೀಮರಾವ ಸೂರ್ಯವಂಶಿ, ಬಲವಂತ ರಾಠೋಡ ಹಾಗೂ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ನೀರು ಸಂರಕ್ಷಿಸುವ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.