ಉಳುವವನೇ ಹೊಲದೊಡೆಯನೆಂದ ದೇವರಾಜ್ ಅರಸು

(ಸಂಜೆವಾಣಿ ವಾರ್ತೆ)ಬಳ್ಳಾರಿ, ಅ.20: ಭೂಸುಧಾರಣೆ ಹಾಗೂ ಉಳುವವನೆ ಹೊಲದೊಡೆಯ ಎಂಬ ಕಾನೂನನ್ನು ಜಾರಿಗೆ ತಂದು ಸಮಾಜದಲ್ಲಿನ ಸಾಮಾಜಿಕ ಅಸಮಾನತೆ, ಶ್ರೀಮಂತ ಬಡವ ಎಂಬ ಅಂತರ ಹೋಗಲಾಡಿಸಲು ಶ್ರಮಿಸಿದವರು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.ತಾಲ್ಲೂಕಿನ ಶ್ರೀ ಕ್ಷೇತ್ರ ಚೇಳ್ಳಗುರ್ಕಿಯ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಸತಿ ನಿಲಯದಲ್ಲಿ ಇಂದು  ಹಮ್ಮಿಕೊಂಡಿದ್ದ ದೇವರಾಜ ಅರಸು ಅವರ 108ನೇ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಅರಸು ಅವರು ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಎಲ್.ಜಿ.ಹಾವನೂರು ಆಯೋಗ ರಚಿಸಿ, ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿದರು.ಇವರ ಅವಧಿಯಲ್ಲಿಯೇ ಮೈಸೂರು ರಾಜ್ಯ 1973ನೇ  ನವೆಂಬರ್ 1 ರಂದು ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಗೊಂಡಿತು.ರಾಜ್ಯದ ಬಡಜನರ ಕತ್ತಲೆ ಹೋಗಲಾಡಿಸಲು ಗೃಹಜ್ಯೋತಿ ಯೋಜನೆ ಜಾರಿಗೆ ತಂದರು.ಬೆಂಗಳೂರು ಸಿಲಿಕಾನ್ ಸಿಟಿ ರೂಪುಗೊಳ್ಳಲು ಸಾಕಷ್ಟು ಶ್ರಮವಹಿಸಿ ಜನರ ಮೆಚ್ಚುಗೆ ಪಡೆದರು.1972 ರಿಂದ 1977 ಹಾಗೂ1978 ರಿಂದ 1980 ರ ವರೆಗೆ ಸುಮಾರು ಎಂಟು ವರ್ಷಗಳ ಕಾಲ ಮುಖ್ಯ ಮಂತ್ರಿಗಳಾಗಿ ಆಡಳಿತ ಮಾಡಿದರು.ಇದು ವರೆಗೂ ಅಷ್ಟು ವರ್ಷಗಳ ಕಾಲ ಕರ್ನಾಟಕ ರಾಜ್ಯದಲ್ಲಿ ಯಾವ ಮುಖ್ಯಮಂತ್ರಿ ಆಡಳಿತ ಮಾಡಿಲ್ಲ.ಆದ್ದರಿಂದ ವಿದ್ಯಾರ್ಥಿಗಳು ಸೇವಾ ಮನೋಭಾವ ಮೈಗೂಡಿಸಿಕೊಂಡು ಭವಿಷ್ಯದಲ್ಲಿ ಸಮಾಜದ ಏಳಿಗೆಗಾಗಿ ಶ್ರಮಿಸಬೇಕೆಂದು ಹೇಳಿದರು.ಬಳ್ಳಾರಿಯ ನಂದಿ ಇಂಟರ್ನ್ಯಾಷನಲ್ ಶಾಲೆಯ ಕರಾಟೆ ಶಿಕ್ಷಕ ಜಡೇಶ ಕಾರ್ಯಕ್ರಮ ಉದ್ಘಾಟಿಸಿ,  ಕರಾಟೆ ಭಾರತ ದೇಶದ ಕೊಡುಗೆ.ಇದೊಂದು ಆತ್ಮರಕ್ಷಣೆಗಾಗಿ ಇರುವ ಕಲೆ.ಇದನ್ನು ಕಲಿತರೆ ಮಾನವನಿಂದ ಹಾಗೂ ಪ್ರಾಣಿಗಳಿಂದ ರಕ್ಷಣೆ ಪಡೆಯಬಹುದು. ಅದಕ್ಕಾಗಿ ಶಾಲೆಗಳಲ್ಲಿ ಬಾಲಕರಿಗಿಂತಲೂ ಹೆಚ್ಚಾಗಿ ಬಾಲಕಿಯರಿಗೆ ಇದನ್ನು ಕಲಿಸಲಾಗುತ್ತದೆಂದರು.ನಿಲಯದ ನೌಕರರಾದ ಸುದರ್ಶನ್, ಎರ್ರೆಮ್ಮ, ಲಕ್ಷ್ಮೀ, ರಮಾದೇವಿ, ಯಲ್ಲಕ್ಕ ಹಾಗೂ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.