
ದಾವಣಗೆರೆ.ಮಾ.೬: ಹರಿಹರ ತಾಲ್ಲೂಕಿನ ಸಾಲಕಟ್ಟೆ ಗ್ರಾಮದ ದಲಿತರು ಸಾಗುವಳಿ ಮಾಡಿಕೊಂಡು ಬಂದಿರುವ ಸರ್ಕಾರಿ ಭೂಮಿಯನ್ನು ಉದ್ದೇಶ ಪೂರ್ವಕವಾಗಿ ಸ್ಮಶಾನಕ್ಕೆ ನೀಡಿರುವುದನ್ನು ಖಂಡಿಸುವುದಾಗಿ ಬಹುಜನ ಸಮಾಜವಾದಿ ಪಕ್ಷದ ರಾಜ್ಯ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಭೂಮಿಯ ಒಡೆತನ ಹೊಂದಿರಬಾರದು ಎಂದು ಗ್ರಾಮದ ಗೌಡರು ಹಾಗೂ ಸ್ವಾಮಿಗಳು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.ಸಾಲಕಟ್ಟೆ ಗ್ರಾಮದಲ್ಲಿ ೧೫ ಎಕರೆ ೩೦ ಸೆಂಟ್ಸ್ ಗೋಮಾಳ ಜಮೀನು ಇದ್ದು, ೫ಜನ ದಲಿತ ಸಮುದಾಯಕ್ಕೆ ಸೇರಿದ ದಲಿತರು ೬ ಎಕರೆ ಜಮೀನನ್ನು ೧ ಎಕರೆ ೩೦ ಸೆಂಟ್ಸ್ ನಂತೆ ಉಳುಮೆ ಮಾಡುತ್ತಿದ್ದಾರೆ.ಮೇಲಿನ ಜಮೀನನ್ನು ಸೇರಿಸಿ, ೮ ಎಕರೆ ಭೂಮಿಯನ್ನು ಕೇವಲ ೫೦೦ ಮನೆಗಳಿರುವ ಗ್ರಾಮಕ್ಕೆ ಸ್ಮಶಾನವನ್ನಾಗಿ ಮಾರ್ಪಡಿಸಿದ್ದಾರೆ. ಉಳಿದ ಭೂಮಿಯಲ್ಲಿ ಮೇಲ್ವರ್ಗದವರು ಅವರಿಗೆ ಜಮೀನಿದ್ದರೂ ಸರ್ಕಾರಿ ಭೂಮಿಯನ್ನು ಹೆಚ್ಚುವರಿಯಾಗಿ ಪಡೆದಿರುತ್ತಾರೆ ಎಂದು ದೂರಿದರು.ಜಿಲ್ಲಾಧಿಕಾರಿಗಳು ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು. ೨ ಎಕರೆ ಜಮೀನನ್ನು ಸ್ಮಶಾನಕ್ಕೆ ತೆಗೆದಿಡಿಸಿ, ಇನ್ನುಳಿದ ಭೂಮಿಯನ್ನು ಯಥಾಸ್ಥಿತಿಯಲ್ಲಿ ದಲಿತರಿಗೆ ಹಕ್ಕುಪತ್ರ ನೀಡಿ ಖಾತೆ ರಿಜಿಸ್ಟರ್ ಮಾಡಿಸಿ ಕೊಡಬೇಕೆಂದು ಮಾ.೧೦ ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಹೆಚ್. ಮಲ್ಲೇಶ್ ಇದ್ದರು.