ಉಲ್ಹಾಸಭರಿತ ಮನಸ್ಸು ಪವಾಡ ಸೃಷ್ಠಿಸಬಲ್ಲದು: ಡಾ. ರಾಮದುರ್ಗ

ವಿಜಯಪುರ, ಏ.9-ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಪಳಗಿಸಿ ವಿದ್ಯಾರ್ಜನೆ ಮಾಡಿದಲ್ಲಿ ಯಶಸ್ಸು ನೂರಕ್ಕೆ ನೂರರಷ್ಟು ಸಾಧ್ಯ ಎಂದು ಸ್ಥಳೀಯ ಬಿಎಲ್‍ಡಿಇ ವೈದ್ಯಕೀಯ ಮಹಾವಿದ್ಯಾಲಯದ ಮನೋಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಂತೋಷÀ ರಾಮದುರ್ಗ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸಮೀಪದ ಇಟ್ಟಂಗಿಹಾಳದಲ್ಲಿರುವ ತುಂಗಳ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋವಿಡ್ ನಂತರ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಹೊಂದಿಕೊಳ್ಳುವಲ್ಲಿ ಕಂಡುಬರುತ್ತಿರುವ ತೊಂದರೆಗಳನ್ನು ನಿವಾರಿಸಲು ಈ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮನಸ್ಸನ್ನು ಯಾವಾಗಲೂ ಸಂತೋಷದಿಂದ ಇಡಬೇಕು. ನೀವು ಏನನ್ನಾದರೂ ಸಾಧಿಸಿದಾಗ ನಿಮಗೆ ನೀವೆ ಬಹುಮಾನ ನೀಡಬೇಕು. ಇದರಿಂದ ಮನಸ್ಸು ಇನ್ನಷ್ಟು ಉಲ್ಹಸಿತವಾಗಿ ನಿಮ್ಮ ಮಾತನ್ನು ಅತಿ ಸುಲಭವಾಗಿ ಕೇಳುತ್ತದೆ ಎಂದರು.
ವಿದ್ಯಾರ್ಥಿಳಿಗೆ ಉತ್ತಮ ಆಹಾರ, ನಿದ್ರೆ ಅತ್ಯವಶ್ಯಕವಾಗಿದ್ದು, ಸ್ಪಷ್ಟವಾದ ಗುರಿಯ ಬೆನ್ನು ಹತ್ತಿ ಸಾಗಬೇಕು ಎಂದರು.
‘ನಾವು ಏಕೆ ಓದಬೇಕು; ಅದರ ಅವಶ್ಯಕತೆ ಏನಿದೆ?’ ಎಂಬುದನ್ನು ಮನಸ್ಸಿಗೆ ತಿಳಿಹೇಳಬೇಕು. ಆಗ ಮನಸ್ಸು ಅಸಾಧ್ಯವಾದುದನ್ನು ಸಾಧ್ಯಮಾಡುವಲ್ಲಿ ಕಾರ್ಯಪ್ರವೃತ್ತವಾಗುತ್ತದೆ ಎಂದು ವಿವರಿಸಿದರು.
ಉಪಪ್ರಾಚಾರ್ಯ ಜಯತೀರ್ಥ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಈ ಎರಡು ವರ್ಷಗಳ ಅವಧಿಯಲ್ಲಿ ಪಡೆಯಬೇಕಾಗಿದ್ದನ್ನು ಯಶಸ್ವಿವಾಗಿ ಪಡೆದದ್ದೇ ಆದರೆ ನಿಮ್ಮ ಮುಂದಿನ ಬದುಕು ಯಶಸ್ವಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕುಮಾರಿ ಹರ್ಷಿತಾ ಪರಿಚಯಿಸಿದರು. ಕುಮಾರಿ ಸ್ಪೂರ್ತಿ ನಿರೂಪಿಸಿದರು.