ಉಲ್ಲಾಳದಲ್ಲಿ ಮನೆಯಂಗಳ ಕಾರ್ಯಕ್ರಮ

ಬೆಂಗಳೂರು, ಏ. ೧೬- ‘ಕುಟುಂಬ ಪ್ರಮೋಧನ್’ ಎನ್ನುವ ಆರ್.ಎಸ್.ಎಸ್. ಪರಿಕಲ್ಪನೆಯನ್ನು ಸೂರಿ, ಕುಟುಂಬ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾದುದು ಎಂದು ಆರ್.ಎಸ್.ಎಸ್. ದಕ್ಷಿಣ ಮಧ್ಯೆ ಕ್ಷೇತ್ರದ ಕಾರ್ಯವಾಹಕ ತಿಪ್ಪೇಸ್ವಾಮಿ ತಿಳಿಸಿದರು.
ಸೂರ್ಯ ಕಲಾವಿದರು ಪ್ರತಿವರ್ಷದಂತೆ ಈ ಬಾರಿಯೂ ಕೂಡ ಉಲ್ಲಾಳು ಉಪನಗರದ ವಿಶ್ವೇಶ್ವರಯ್ಯ ೬ನೇ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ‘ಮನೆ ಅಂಗಳ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಸುತ್ತ-ಮುತ್ತಲಿನ ಕುಟುಂಬದ ಸದಸ್ಯರು ಒಂದಾಗಿ ಸೇರಿ ಹಲವು ಚಿಂತನ-ಮಂಥನ ಕಾರ್ಯಕ್ರಮ ನಡೆಸುವುದರೊಂದಿಗೆ ಸಮಾಜಕ್ಕೆ ಕ್ರಿಯಾಶೀಲ ವ್ಯಕ್ತಿಗಳನ್ನಾಗಿ ಮಾಡುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ನಟ ಮೂಗ್ ಸುರೇಶ್ ಮಾತನಾಡಿ “ಭಾರತದ ಮೇಲೆ ಹಲವರು, ಹಲವಾರು ಬಾರಿ ದಾಳಿ ನಡೆಸಿ ನಮ್ಮ ಸಂಪತ್ತನ್ನು ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾದರೆ ಹೊರತು ನಮ್ಮ ಸಂಸ್ಕೃತಿಯನ್ನು ಕೊಳ್ಳೆ ಹೊಡೆಯುವಲ್ಲಿ ಮಾತ್ರ ವಿಫಲವಾದರು”. ಇದರಿಂದಲೆ ನಮ್ಮ ಸಂಸ್ಕೃತಿ ಎಂತಹ ಮಹತ್ವ ಪೂರ್ಣವಾದುದು ಎಂದು ಊಹಿಸಬಹುದು. ಅದರಿಂದಲೆ ಇಂದಿಗೂ ನಮ್ಮ ಸಂಸ್ಕೃತಿಗೆ ಬೇಡಿಕೆ ಇರುವುದು ಎಂದರು.
ಕಾರ್ಯಕ್ರಮದಲ್ಲಿ ಸುಮಾ ಪಟವರ್ಧನ್, ನಟರಾದ ಸಂಜಯ ಸೂರಿ, ವಿಕ್ರಮ್ ಸೂರಿ, ನಮಿತ ರಾವ್ ಹಾಗೂ ಸೂರ್ಯ ಕಲಾವಿದರ ಸದಸ್ಯರು ಉಪಸ್ಥಿತರಿದ್ದರು.