ಉಲ್ಟಾ ಹೊಡೆದ ಸಚಿವ ಯೋಗೇಶ್ವರ್

ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳಿ ಭೇಟಿ ಸಾಧ್ಯವಾಗದೆ ಬರಿಗೈಯಲ್ಲಿ ವಾಪಸ್ಸಾಗಿರುವ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ ಎಂದು ಉಲ್ಟಾ ಹೊಡೆದಿದ್ದಾರೆ.
ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ನಾನು ಹೋಗಿದ್ದು ನಿಜ. ವೈಯಕ್ತಿಕ ಕೆಲಸದ ಮೇಲೆ ಹೋಗಿದ್ದೆ ಎಂದು ಸಮಜಾಯಿಷಿ ನೀಡುವ ಮೂಲಕ ವರಿಷ್ಠರ ಭೇಟಿಗೆ ಹೋಗಿಲಿಲ್ಲ ಎಂದು ಪರೋಕ್ಷವಾಗಿ ತಮ್ಮ ದೆಹಲಿ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ.
ದೆಹಲಿಗೆ ಆಗಾಗ್ಗೆ ಹೋಗುತ್ತಲೇ ಇರುತ್ತೇನೆ. ಅದರಲ್ಲೇನೂ ವಿಶೇಷವಿಲ್ಲ. ಬಲವಂತವಾಗಿ ತಮ್ಮಿಂದ ಏನನ್ನೂ ಹೇಳಿಸಲು
ಯತ್ನಿಸಬೇಡಿ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸಚಿವ ಯೋಗೇಶ್ವರ್ ಕೆಲ ಶಾಸಕರ ಜತೆ ದೆಹಲಿಗೆ ತೆರಳಿ ವರಿಷ್ಠರ ಭೇಟಿಗೆ ಪ್ರಯತ್ನಿಸಿದ್ದರು. ಆದರೆ, ವರಿಷ್ಠರು ಭೇಟಿಗೆ ಅವಕಾಶ ನೀಡಿರಲಿಲ್ಲ. ಇದು ಬಿಜೆಪಿ ವಲಯದಲ್ಲಿ ಸುದ್ದಿಗೆ ಗ್ರಾಸವಾಗಿತ್ತು. ಹಾಗೆಯೇ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ನಡೆಸುತ್ತಿರುವ ಸಚಿವ ಯೋಗೇಶ್ವರ್ ವಿರುದ್ಧ ಹಲವು ಸಚಿವರು, ಶಾಸಕರು ಆಕ್ರೋಶ ಹೊರ ಹಾಕಿದ್ದ ಬೆನ್ನಲ್ಲೆ ಯೋಗೇಶ್ವರ್ ಅವರು ಉಲ್ಟಾ ಹೊಡೆದು ದೆಹಲಿಗೆ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ ಎಂದು ಹೇಳಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.