
ನವದೆಹಲಿ,ಸೆ.12- ಡಿಸೇಲ್ ವಾಹನಗಳ ಮಾರಾಟದ ಮೇಲೆ ಹೆಚ್ಚುವರಿಯಾಗಿ ಶೇಕಡ 10ರಷ್ಟು ಸರಕು ಮತ್ತು ಸೇವಾ ತೆರಿಗೆ –ಜಿಎಸ್ ಟಿ ಹಾಕುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಕೆಲವು ಮಾಧ್ಯಮಗಳಲ್ಲಿ ಡಿಸೇಲ್ ವಾಹನಗಳ ಮೇಲೆ ಶೇಕಡ 10ರಷ್ಟು ಹೆಚ್ಚುವರಿ ತೆರಿಗೆ ಹಾಕಲು ಉದ್ದೇಶಿಸಲಾಗಿದೆ ಎನ್ನುವ ವರದಿ ಹಿನ್ನೆಲೆಯಲ್ಲಿ ಮಾಹಿತಿ ನೀಡಿದ ಅವರು, ಈ ರೀತಿಯ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆಯಿಲ್ಲ ಎಂದು ಹೇಳಿದ್ದಾರೆ.
2070ರ ವೇಳೆಗೆ ಇಂಗಾಲ ಆಮ್ಲವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಇದರ ಜೊತೆಗೆ ಡಿಸೇಲ್ ಸೇರಿದಂತೆ ಮಾಲಿನ್ಯಕ್ಕೆ ಮಾರಕವಾಗಬಹುದಾದ ಇಂಧನದ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಶುದ್ಧ ಮತ್ತು ಹಸಿರು ಇಂಧನಕ್ಕೆ ಒತ್ತು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಸಂಜೆಯೇ ಪತ್ರ ಕಳುಹಿಸುವುದಾಗಿ ಹೇಳಿದ್ದ ಗಡ್ಕರಿ
ದೆಹಲಿಯಲ್ಲಿ ಭಾರತೀಯ ಆಟೋ ಮೊಬೈಲ್ ಉತ್ಪಾದಕ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,”ಅತ್ಯಂತ ಮಾಲಿನ್ಯಕಾರಕ” ಇಂಧನದಿಂದ ವಾಹನಗಳ ತಯಾರಿಕೆ ಆಟೋಮೊಬೈಲ್ ಕಂಪನಿಗಳನ್ನು ನಿರುತ್ಸಾಹಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಡೀಸೆಲ್ ಚಾಲಿತ ವಾಹನಗಳ ಮೇಲೆ ಶೇಕಡಾ 10 ರಷ್ಟು ಜಿಎಸ್‍ಟಿ ವಿಧಿಸುವುದಾಗಿ ಪ್ರಕಟಿಸಿದ್ದಾರೆ.
ಶೇಕಡಾ 10 ರಷ್ಟು ಜಿಎಸ್‍ಟಿ ಹೆಚ್ಚಿಸುವ ಪತ್ರ ಸಿದ್ದವಾಗಿದೆ. ಡೀಸೆಲ್ ವಾಹನಗಳು ಮತ್ತು ಎಲ್ಲಾ ಎಂಜಿನ್‍ಗಳ ಮೇಲೆ ಹೆಚ್ಚುವರಿ ಶೇಕಡಾ 10ರಷ್ಟು ಜಿಎಸ್‍ಟಿ ಹಾಕಲು ಹಣಕಾಸು ಸಚಿವರಿಗೆ ಸಂಜೆಯೇ ಪತ್ರ ಕಳುಹಿಸುವುದಾಗಿ ತಿಳಿಸಿದ್ದಾರೆ
ಸಾಮಾಜಿಕ ಜಾಲತಾಣದಲ್ಲಿ ವಿಷಯ ವೈರಲ್ ಆಗುತ್ತಿದ್ದಂತೆ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿ, ಯಾವುದೇ ಇಂತಹ ಪ್ರಸ್ತಾಪ ಇಲ್ಲ ಎಂದಿದ್ದಾರೆ.