ಉರ್ದು ಶಾಲೆಯ ಮಕ್ಕಳು ಕನ್ನಡ ಕಲಿಯುವುದು ಅವಶ್ಯಕ: ನಾಸೀರ್ ಹುಸೇನ್ ಉಸ್ತಾದ್

ಕಲಬುರಗಿ,ಜು.26: ಉರ್ದು ಶಾಲೆಯ ಮಕ್ಕಳು ಕನ್ನಡ ಕಲಿಯುವುದು ಅವಶ್ಯಕವಾಗಿದೆ ಎಂದು ಜೆಡಿಎಸ್ ಮುಖಂಡ ನಾಶೀರ್ ಹುಸೇನ್ ಉಸ್ತಾದ್ ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯದ ವತಿಯಿಂದ ಕೆಪಿಎಸ್ ಉರ್ದು ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ‘ಬಾರಿಸು ಕನ್ನಡ ಡಿಂಡಿಮವ’ ಕನ್ನಡ ಭಾಷೆಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಕಲಿಯುವುದು ಕರ್ನಾಟಕದಲ್ಲಿರುವವರಿಗೆ ಅಗತ್ಯವಾಗಿದೆ. ವ್ಯವಹಾರಿಕ ಜೀವನದಲ್ಲಿ ಭಾಷೆ ಅತ್ಯಂತ ಪ್ರಮುಖ ಸ್ಥಾನವನ್ನು ವಹಿಸುತ್ತದೆ ಎಂದರು.
ಇದೇ ರೀತಿಯಾಗಿ ಮುಂದುವೆಯೂ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ಹೆಚ್ಚು ಹೆಚ್ಚು ಉರ್ದು ಶಾಲೆಯಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಅವರು ಹೇಳಿದರು. ನೇತೃತ್ವ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾತನಾಡಿ, ಕನ್ನಡದ ಏಳಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ಕಂಕಣ ಬದ್ಧವಾಗಿದೆ ಎಂದು ತಿಳಿಸಿದರು.
ಡಾ. ಗೌಸೋದ್ದಿನ್ ತುಮಕೂರಕರ್ ಅವರು ವಿಶೇಷ ಉಪನ್ಯಾಸ ನೀಡಿ, ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಕನ್ನಡ ಭಾಷೆಯನ್ನು ಉಸಿರಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದಪರಿಷತ್ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ್ ಮುಲಗೆ ಅವರು ಮಾತನಾಡಿ, ಹಂತ ಹಂತವಾಗಿ ಉರ್ದು ಶಾಲೆಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಏರ್ಪಡಿಸುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಅಕ್ಷರ ದಾಸೋಹ ಅಧಿಕಾರಿ ಭರತರಾಜ್ ಸಾವಳಗಿ ಅವರು ಮಾತನಾಡಿ, ಉರ್ದು ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳು ಸತತವಾಗಿ ನಡೆಯಬೇಕೆಂದು ಸಲಹೆ ನೀಡಿದರು. ಅತಿಥಿಗಳಾಗಿ ಕಲ್ಯಾಣ ಕುಮಾರ್ ಶೀಲವಂತ್, ಶ್ರೀಮತಿ ಕೌಸರ್ ಸುಲ್ತಾನ್ ಮತ್ತು ಶಿವಾನಂದ್ ಪಾಟೀಲ್, ಅಲಿಂ ಪಟೇಲ್ ಅವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಜಿಲ್ಲಾ ಅಧ್ಯಕ್ಷ ಮಹೇಶ್ ಹೂಗಾರ್. ಹಾಗೂ ಉತ್ತರ ವಲಯದ ನೂತನ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸೈಯದ್ ಅಹ್ಮದ್ ಅಲಿ. ಮತ್ತು ಶಿಕ್ಷಣ ಸಾರಥಿ ಪ್ರಶಸ್ತಿ ವಿಜೇತ ಸದಾಶಿವ ಮಿರ್ಜಿ ಶಹಬಜಾರ್ ಹಾಗೂ ಓಂಕಾರ್ ಸ್ವಾಮಿ . ಮತ್ತು ಕೌಸರ್ ಸುಲ್ತಾನಾ ಅವರನ್ನು ಸನ್ಮಾನಿಸಲಾಯಿತು.
ನವಾಬಖಾನ್ ಅವರು ಕಾರ್ಯಕ್ರಮ ನಿರೂಪಿಸಿದರು. ಬಸವರಾಜ್ ಮಳ್ಳಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷ ಶಿವಯೋಗೆಪ್ಪ ಬಿರಾದಾರ್. ಗೌರವ ಕಾರ್ಯದರ್ಶಿ ಹಣಮಂತರಾಯ್ ದಿಂಡೂರೆ. ಶಿನಾಗೇಶ್ ತಿಮ್ಮಾಜಿ. ಗೌರವ ಕೋಶಾಧ್ಯಕ್ಷ ಶ್ರೀಕಾಂತ್ ಪಾಟೀಲ್, ಶಿವಲಿಂಗಪ್ಪ ಟೆಂಗಳಿ ಉಪಳಾಂವ್ ಸೇರಿದಂತೆ ಉತ್ತರ ವಲಯದ ಎಲ್ಲ ಪದಾಧಿಕಾರಿಗಳು ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.